ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ರಾತ್ರಿ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು
ತುಮಕೂರು(ಆ.17): ಶಿವಮೊಗ್ಗದಲ್ಲಿ ನಡೆದ ಗಲಾಟೆಯ ಬೆನ್ನಲ್ಲೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ. ನಗರದ ಬಿಜಿಎಸ್ ವೃತ್ತದಿಂದ ಬಸ್ ನಿಲ್ದಾಣದ ಕಡೆಗೆ ತೆರಳುವ ಅಶೋಕ ರಸ್ತೆಯಲ್ಲಿ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಸಾವರ್ಕರ್ ಚಿತ್ರ ಇರುವ ಪ್ಲೆಕ್ಸ್ ಹಾಕಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ರಾತ್ರಿ ಯಾರೋ ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಹರಿದು ಹಾಕಿರುವ ಸಂಗತಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್ ನಗರದ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಇರುವ ಫ್ಲೆಕ್ಸ್ ಹಾಕಿಸಿದ್ದರು. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಸಾವರ್ಕರ್ ಅವರ ಚಿತ್ರವನ್ನು ಮಾತ್ರ ಹರಿದು ಹಾಕುವ ಮೂಲಕ ಶಿವಮೊಗ್ಗ ಬಳಿಕ ತುಮಕೂರಿನಲ್ಲೂ ಫ್ಲೆಕ್ಸ್ ಸಮರ ಶುರುವಾಗಿದೆ.
ಫ್ಲೆಕ್ಸ್ ಗಲಭೆ: ಶಿವಮೊಗ್ಗ ಬೂದಿ ಮುಚ್ಚಿದ ಕೆಂಡ
ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣರಾದವರ ಬಿಡಲ್ಲ: ಆರಗ
ಶಿವಮೊಗ್ಗ: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಾವರ್ಕರ್ ಬ್ರಿಟಿಷರ ಬೂಟ್ ನೆಕ್ಕಿದ್ದ ಎಂದು ಕೆಲವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇಂಥ ಮನಸ್ಥಿತಿಯವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತುಮಕೂರಿನಲ್ಲಿ, ಮಂಗಳೂರಿನಲ್ಲೂ ಸಾವರ್ಕರ್ ಪೋಟೋಗೆ ಅಡ್ಡಿಪಡಿಸಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆ ನಿಶ್ಚಿತ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ತುಮಕೂರಿನಲ್ಲೂ ಸಾವರ್ಕರ್ ಭಾವಚಿತ್ರವನ್ನು ಕೆಲವರು ಹರಿದು ಹಾಕಿದ್ದಾರೆ. ಅಂಥವರ ಮೇಲೆ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಮಂಗಳೂರಿನಲ್ಲೂ ಸಾವರ್ಕರ್ ಫೋಟೋ ಪ್ರದರ್ಶಿಸಿದ್ದಕ್ಕೆ ಕಾರ್ಯಕ್ರಮಕ್ಕೇ ಅಡ್ಡಿಪಡಿಸಿದ್ದಾರೆ. ಇವರಾರಯರಿಗೂ ಸಾವರ್ಕರ್ ಯಾರೆಂಬುದೇ ಗೊತ್ತಿಲ್ಲ. ಸುಮ್ಮನೆ ಅಪಪ್ರಚಾರದಲ್ಲಿ ತೊಡಗಿಕೊಂಡು ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪರಿಸ್ಥಿತಿ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಮಾತು ಕೇಳಿಬರುತ್ತಿದೆಯಲ್ವಾ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆರಗ, ಪಾಸು-ಫೇಲು ಸರ್ಟಿಫಿಕೇಟ್‌ಗೋಸ್ಕರ ಕೆಲಸ ಮಾಡುವುದಿಲ್ಲ. ಈ ಹಿಂದೆ ಕೂಡ ಇಂತಹ ಹಲವಾರು ಘಟನೆ ನಡೆದಿದೆ. ಅದನ್ನೀಗ ತುಲನೆ ಮಾಡಲು ಹೋಗಲ್ಲ. ಮುಂದೆ ಈ ರೀತಿ ಘಟನೆ ನಡೆಯಬಾರದು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು. ಇದು ನಮ್ಮ ಇಚ್ಛೆ. ಆದರೆ ಕೆಲವರಿಗೆ ಈ ಇಚ್ಛೆ ಇಲ್ಲ. ಅಂಥವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ದೇಶಭಕ್ತರ ಫ್ಲೆಕ್ಸ್ ತೆರವು ಮಾಡಿದ ಕಿಡಿಗೇಡಿಗಳ ಬಂಧಿಸಿ: ನಳಿನ್‌ಕುಮಾರ್ ಕಟೀಲ್
ಇದೇ ವೇಳೆ ಗೃಹಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆರಗ ಜ್ಞಾನೇಂದ್ರ, ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಅದು ಸರ್ಕಾರದ ಇಲಾಖೆ. ಗೃಹ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಗಲಭೆ ಸೃಷ್ಟಿಸಿದ ಯಾವುದೇ ಕ್ರಿಮಿನಲ್‌ಗಳನ್ನು ಬಿಡುವುದಿಲ್ಲ. ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದೊಯ್ಯಲು ಕ್ರಮ ಕೈಗೊಳ್ಳುತ್ತೇವೆ. ಧರ್ಮದ ಆಧಾರದ ಮೇಲೆ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಾವರ್ಕರ್ ಫೋಟೋ ಹರಿದವರಿಗೆ ಗುಂಡು ಹಾರಿಸಿ: ಸೊಗಡು ಶಿವಣ್ಣ
ತುಮಕೂರು: ವೀರ ಸಾವರ್ಕರ್ ಫೋಟೋ ಹರಿದವರಿಗೆ ಕಂಡಲ್ಲಿ ಗುಂಡು ಹೊಡೆಯಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಗುಡುಗಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿಭಂಗ ಮಾಡುವವರನ್ನು ಗಡಿಪಾರು ಮಾಡಬೇಕು. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ ನಡೆದ ಘಟನೆ ಮತ್ತೆ ಎಲ್ಲೂ ಮರುಕಳಿಸದಂತೆ ಕೊನೆಗಾಣಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸರು ನಿಗಾ ವಹಿಸಬೇಕು. ಶಿವಮೊಗ್ಗದಲ್ಲಿನ ಘಟನೆ ಕೊನೆ ಆಗಬೇಕು ಎಂದು ಮನವಿ ಮಾಡಿದರು.
ಸಾವರ್ಕರ್ ಬಗ್ಗೆ ಮಾತನಾಡಲು ಮುಸಲ್ಮಾನರಿಗೆ ಹಕ್ಕಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಹಾರ್ದತಯುತವಾಗಿ ಬಾಳಿಕೊಂಡು ಬಂದಿದ್ದೇವೆ. ಅವರು ಹೊಂದಿಕೊಂಡು ಹೋಗೋಲ್ಲ. ನಮ್ಮ ಜೊತೆ ಸಹಬಾಳ್ವೆಯಿಂದ ಬಾಳುವವರಿಗೆ ಸರ್ಕಾರ ಸೌಲಭ್ಯ ಕೊಡಲಿ. ಇಲ್ಲವಾದರೆ ನಿಲ್ಲಿಸಲಿ. ಮುಸ್ಲಿಂರ ವಿರುದ್ಧ ಹಿಂದೂಗಳು ಒಗ್ಗೂಡಬೇಕು. ದೇಶದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಅಲ್ಲದೇ ನಮ್ಮ ದೇಶದ ಕಾನೂನಿಗೆ ಬೆಲೆ ಕೊಡದ ಮುಸ್ಲಿಂರಿಗೆ ಪಾಕಿಸ್ತಾನಕ್ಕೆ ಹೋಗಲು ವೀಸಾ ಕೊಡಬೇಕು. ಮುಂದಿನ ದಿನಗಳಲ್ಲಿ ಹಿಂದೂಗಳು ಸಂತಾನವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
