28 ಎಕರೆ ಸರ್ಕಾರಿ ಜಮೀನಿನಲ್ಲಿ ಗಿಡಗಳಿಗೆ ಕೊಡಲಿ ಪೆಟ್ಟು|ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ನೀಲಗಿರಿ ಸೇರಿದಂತೆ ವಿವಿಧ ತಳಿಗಳು ಬಲಿ| ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ನಡೆದ ಘಟನೆ| ಅರಣ್ಯ ನಾಶದ ಹಿಂದೆ ಕೆಲವು ಗ್ರಾಪಂ ಸದಸ್ಯರ ಕೈವಾಡವಿದೆ ಎಂದು ಗ್ರಾಮಸ್ಥರ ದೂರು|

ಕಲಘಟಗಿ(ಏ.09): ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ಭಯದಲ್ಲಿ ಜನರೆಲ್ಲರೂ ಮನೆಗಳಲ್ಲಿ ಲಾಕ್‌ ಆಗಿದ್ದಾರೆ. ಈ ಮಧ್ಯೆಯೇ ತಾಲೂಕಿನ ಮುಕ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೀಕಟ್ಟಿ ಗ್ರಾಮದಲ್ಲಿ ಮರಗಳ ಮಾರಣ ಹೋಮವೇ ನಡೆದಿದೆ.

Add Asianetnews Kannada as a Preferred SourcegooglePreferred

ಅಲ್ಲಿನ ಸರ್ವೇ ನಂ. 137 ಸರ್ಕಾರಿ ತುರುಮಂದಿ ಹದ್ದಿನಲ್ಲಿ ಸುಮಾರು 28 ಎಕರೆ ಸರ್ಕಾರಿ ಜಮೀನಿನಲ್ಲಿ ಬೆಳೆದ ನೀಲಗಿರಿ, ಆಕಾಶ್‌ ವಿವಿಧ ತಳಿಯ ಮರಗಳನ್ನು ಸ್ಥಳೀಯ ಗ್ರಾಮಸ್ಥರೇ ಅಕ್ರಮವಾಗಿ ಕಡಿದಿರುವುದು ಇದೀಗ ಬಯಲಾಗಿದೆ.

ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

ಅಕ್ರಮವಾಗಿ ಕಡಿದು ತಂದ ಕಟ್ಟಿಗೆಯನ್ನು ಮನೆಗಳಲ್ಲಿ ಹಿತ್ತಲಲ್ಲಿ, ಹೊಲಗಳಲ್ಲಿ ಮುಚ್ಚಿಡಲಾಗಿದೆ. ಈ ವಿಷಯ ಮುಕ್ಕಲ್‌ ಪಿಡಿಒ ಡಿ.ಬಿ. ಜಗದೀಶ್‌ ಅವರಿಗೆ ತಿಳಿಯುತ್ತಿದ್ದಂತೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ದೊಡ್ಡಮನಿ ಅವರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯಾಧಿಕಾರಿ ಹುಣಸಿಕಟ್ಟಿ ಗ್ರಾಮದ 6 ಆರೋಪಿಗಳನ್ನು ಕಡಿದ ಗಿಡಗಳ ಸಮೇತ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಈ ಅರಣ್ಯ ನಾಶ ಪ್ರಕರಣದಲ್ಲಿ ಗ್ರಾಮದ ಹಲವಾರು ಜನರು ಭಾಗಿಯಾಗಿದ್ದು ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

28 ಎಕರೆ ಸರ್ಕಾರಿ ಜಮೀನಿನಲ್ಲಿ ಬೆಳೆಸಿದ ಗಿಡಮರಗಳು ಕಣ್ಮರೆಯಾಗಿದ್ದು, ಈ ಅರಣ್ಯ ನಾಶದ ಹಿಂದೆ ಕೆಲವು ಗ್ರಾಪಂ ಸದಸ್ಯರ ಕೈವಾಡವಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅರಣ್ಯ ನಾಶಕ್ಕೆ ಕುಮ್ಮಕ್ಕು ನೀಡಿದ ವ್ಯಕ್ತಿ ಯಾರೇ ಆಗಿರಲಿ ಅವರನ್ನು ಬಂಧಿಸಲಾಗುವುದು ಎಂದು ಅರಣ್ಯಧಿಕಾರಿ ಪಾಟೀಲ್‌ ಪತ್ರಿಕೆಗೆ ತಿಳಿಸಿದ್ದಾರೆ.