ಬೆಂಗಳೂರು(ಮೇ.08): ಕೊರೋನಾ ಸೋಂಕು ತಡೆಯುವ ಸಂಬಂಧ ಎಚ್ಚರಿಕೆ ವಹಿಸುವ ಬಗ್ಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚನೆ ಪಾಲನೆ ಮಾಡಬೇಕು. ಇಲ್ಲದಿದ್ದರೆ ಹಸಿರು ವಲಯಗಳಾಗಿರುವ ಪ್ರದೇಶಗಳು ಕೆಂಪು ವಲಯಗಳಾಗಲಿವೆ ಎಂದು ರಾಜ್ಯ ಸರ್ಕಾರದ ಹಿರಿಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಜನರು ಕೊರೋನಾ ಸೋಂಕು ಹೋಗಿದೆ ಎಂಬ ಮನಸ್ಥಿತಿಯಲ್ಲಿ ಓಡಾಟ ಮಾಡುತ್ತಿದ್ದಾರೆ. ಆ ರೀತಿ ಯಾರೂ ಮಾಡಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಜಂಟಿಯಾಗಿ ಹೇಳಿದ್ದಾರೆ.

ತಮ್ಮ ಕ್ವಾರಂಟೈನ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೂವರೂ ಸಚಿವರು, ನಾವು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದೆವು. ಇದೀಗ ಕ್ವಾರಂಟೈನ್‌ ಅವಧಿ ಮುಗಿದಿದ್ದು, ಎರಡು ಪಟ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

'ಉತ್ತರ ಭಾರತದಲ್ಲಿ ಸಿಲುಕಿದ ಕನ್ನಡಿಗರನ್ನ ಕರೆತರಲು ವಿಶೇಷ ರೈಲು'

ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ವಿಷಯ ಸಂಬಂಧ ಯಾವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ನೀಡಲಾಗಿದೆ. ಅದನ್ನು ಪಾಲನೆ ಮಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಹಸಿರು ವಲಯಗಳಾಗಿರುವ ಪ್ರದೇಶಗಳು ಕೆಂಪು ವಲಯಗಳಾಗಲಿವೆ. ವಿದೇಶದಿಂದ ಕನ್ನಡಿಗರು ರಾಜ್ಯಕ್ಕೆ ಆಗಮಿಸುತ್ತಿದ್ದು, ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾಸ್ಕ್‌ ಸೇರಿದಂತೆ ಇತರೆ ಪರಿಕರಗಳು ರಾಜ್ಯದಲ್ಲಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತಷ್ಟುಆರ್ಡರ್‌ ಮಾಡಿದ್ದೇವೆ ಎಂದು ಹೇಳಿದರು.

ಸುಧಾಕರ್‌ ಮಾತನಾಡಿ, ಪತ್ರಕರ್ತನಿಂದ ಸೋಂಕು ತಗುಲುವ ಸಾಧ್ಯತೆ ಇರಲಿಲ್ಲ. ಆದರೂ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕಾಗಿ ಸ್ವಯಂ ಕ್ವಾರಂಟೈನ್‌ಗೆ ಹೋಗಿದ್ದೆವು. ಮನೆಯಲ್ಲಿಯೇ ಕೊರೋನಾ ನಿಯಂತ್ರಣ ಹೇಗೆ ಮಾಡಬಹುದು ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಪತ್ರಕರ್ತನ ಜತೆ ಪ್ರೈಮರಿ ಸಂಪರ್ಕದಲ್ಲಿದ್ದ ಕಾರಣ ಪರೀಕ್ಷೆಗೊಳಗಾಗಿದ್ದೆವು. ವರದಿಯು ನೆಗೆಟಿವ್‌ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ವಯಂ ಕ್ವಾರಂಟೈನ್‌ನಲ್ಲಿದ್ದೆವು. ಈಗ ನಾವು ಕ್ವಾರಂಟೈನ್‌ ಮುಕ್ತರಾಗಿದ್ದೇವೆ. ಕ್ವಾರಂಟೈನ್‌ ಅವಧಿಯಲ್ಲಿ ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದ್ದೇವೆ ಎಂದರು.

ಸಿ.ಟಿ.ರವಿ ಮಾತನಾಡಿ, ಪಾಲಿಕೆ ಆಯುಕ್ತರು ಕರೆ ಮಾಡಿ ಕ್ವಾರಂಟೈನ್‌ಗೆ ಹೋಗಬೇಕು ಎಂದಿದ್ದರು. ಸೋಂಕಿತ ಪತ್ರಕರ್ತನಿಗೂ, ನನ್ನ ಟ್ರಾವೆಲ್‌ ಹಿಸ್ಟರಿಗೂ ಹೋಲಿಕೆಯಾಗುತ್ತಿರಲಿಲ್ಲ. ಆದರೂ ಅಪವಾದ ಬರಬಾರದು ಮತ್ತು ನಿಯಮ ಪಾಲಿಸುವುದು ನಮ್ಮ ಧರ್ಮ ಎಂಬ ಕಾರಣಕ್ಕಾಗಿ ಸ್ವಯಂ ಕ್ವಾರಂಟೈನ್‌ಗೊಳಗಾಗಿದ್ದೆ. ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮನೆಯಲ್ಲಿಯೇ ಇದ್ದು ಮಾಡುತ್ತಿದ್ದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರಕ್ಕಿಂತ ಹೆಚ್ಚು ಜನರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.