*   ಬಿಬಿಎಂಪಿಯ 8 ವಲಯಕ್ಕೆ ತಲಾ ಒಂದು ಕಾರ್ಯಪಡೆ*  ಶಾಸಕರು, ಸಂಸದರು, ಎಂಎಲ್ಸಿಗಳು, ಅಧಿಕಾರಿಗಳು ಸದಸ್ಯರು*  ವಲಯದ ಅಭಿವೃದ್ಧಿ ಕಾರ್ಯ, ತುರ್ತು ಕ್ರಮದ ಜವಾಬ್ದಾರಿ  

ಬೆಂಗಳೂರು(ಮೇ.21): ಸಚಿವರ ನೇತೃತ್ವದಲ್ಲಿ ಬಿಬಿಎಂಪಿಯ ಎಂಟು ವಲಯಗಳಿಗೆ ತಲಾ ಒಂದು ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ಸತತ ಮೂರನೇ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು. ಶುಕ್ರವಾರ ಕೆಆರ್‌ಪುರ ವಿಧಾನಸಭಾ ಕ್ಷೇತ್ರದ ಶ್ರೀ ಸಾಯಿ ಲೇಔಟ್‌ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿ ತಪಾಸಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆ ಮಾಡಬೇಕು. ಆಯಾ ಭಾಗದ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಹಿರಿಯ ಅಧಿಕಾರಿಗಳು, ಜಂಟಿ ಆಯುಕ್ತರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಟಾಸ್ಕ್‌ ಫೋರ್ಸ್‌ ನೇತೃತ್ವದಲ್ಲಿ ಆಯಾ ವಲಯದ ಅಭಿವೃದ್ಧಿ ಕಾರ್ಯಗಳು, ಪ್ರವಾಹದಂತಹ ಸಂದರ್ಭಗಳಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಬೆಂಗ್ಳೂರಲ್ಲಿ ಕಳೆದ 50 ವರ್ಷದಲ್ಲೇ ಅತೀ ತಣ್ಣನೆಯ ದಿನ ದಾಖಲು: ಗಾರ್ಡನ್‌ ಸಿಟಿ ಕೂಲ್‌ ಕೂಲ್‌..!

ರಾಮಮೂರ್ತಿ ನಗರದಲ್ಲಿ ಉಂಟಾದ ಮಳೆ ಹಾನಿ ಪರಿಶೀಲನೆ ನಡೆಸಿದ ಅವರು, ಹೆಬ್ಬಾಳ ವ್ಯಾಲಿಗೆ ಹೆಬ್ಬಾಳ ಮತ್ತು ಯಲಹಂಕದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ರೈಲ್ವೆ ಸೇತುವೆಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾಮಗಾರಿಗೆ .42 ಕೋಟಿ ಅನುದಾನ ನೀಡಲಾಗಿದೆ. ವಿನ್ಯಾಸವೂ ಸಿದ್ಧಗೊಂಡಿದ್ದು, ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಟೆಂಡರ್‌ ಪ್ರಕ್ರಿಯೆ ಆರಂಭಿಸಿ ಮುಂಬರುವ ಫೆಬ್ರವರಿ ವೇಳೆ ಸಂಪೂರ್ಣ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದರು.

ಜತೆಗೆ ಕಾಲುವೆಯ ಅಗಲೀಕರಣಕ್ಕೂ ಆದೇಶ ನೀಡಲಾಗಿದೆ. ಐಟಿಐ ಪ್ರದೇಶದಲ್ಲಿ ಅನುಮತಿ ಪಡೆದು ಸುಮಾರು 900 ಮೀ. ಹೆಚ್ಚುವರಿ ಚರಂಡಿ ವ್ಯವಸ್ಥೆ ಮಾಡಲಾಗುವುದು. ಇದರಿಂದ ರಾಮಮೂರ್ತಿ ನಗರದ ಸುಮಾರು ಮೂರ್ನಾಲ್ಕು ಬಡಾವಣೆಗಳಲ್ಲಿ ಇರುವ ಸಮಸ್ಯೆ ಪರಿಹಾರವಾಗಲಿದೆ. ಇನ್ನು ಚರಂಡಿಗಳ ಮೇಲೆ ಕಟ್ಟಡಗಳನ್ನು ಕಟ್ಟಿದ್ದು, ಅವುಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

Bengaluru Rains: ಮಳೆ ಅವಾಂತರದಿಂದ ‘ಬ್ರ್ಯಾಂಡ್‌ ಬೆಂಗಳೂರಿಗೆ’ ಧಕ್ಕೆ: ಎಸ್‌.ಎಂ.ಕೃಷ್ಣ

ಈ ವೇಳೆ ಮುಖ್ಯಮಂತ್ರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಮುಖ್ಯಆಯುಕ್ತ ತುಷಾರ್‌ ಗಿರಿನಾಥ್‌ ಉಪಸ್ಥಿತರಿದ್ದರು.

ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡಲ್ಲ: ಬೊಮ್ಮಾಯಿ

ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡುವುದಿಲ್ಲ. ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ 2006-07ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ. ಯಾವುದೇ ಅಧಿಸೂಚಿತ ಕೆರೆ ಪ್ರದೇಶದಲ್ಲಿ ಬಡಾವಣೆ ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ. ಬೆಂಗಳೂರು ನಗರ, ಯಲಹಂಕ ತಾಲೂಕು, ಯಲಹಂಕ ಹೋಬಳಿ, ದೊಡ್ಡ ಬೆಟ್ಟಹಳ್ಳಿ ಗ್ರಾಮದಲ್ಲಿನ ಜಲಾವೃತ ಪ್ರದೇಶವನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಲು ಕೋರಿದ್ದ ಮೇರೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.