ಮೃತಪಟ್ಟ ಗರ್ಭಿಣಿ ಪಾರ್ಥಿವ ಶರೀರ ಪಡೆಯಲು ಆಸ್ಪತ್ರೆ ಬಿಲ್ ಪಾವತಿಸಿದ ಸಚಿವ ಜಮೀರ್
ಚಿಕಿತ್ಸಾ ವೆಚ್ಚ ನೀಡದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಗರ್ಭಿಣಿಯ ಪಾರ್ಥಿವ ಶರೀರ ನೀಡಲು ನಿರಾಕರಿಸಿದ್ದರಿಂದ ಸಂಕಷ್ಟದಲ್ಲಿದ್ದ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದ ಸಚಿವ ಜಮೀರ್ ಅಹಮದ್ ಖಾನ್ 2.5 ಲಕ್ಷ ರು. ಬಿಲ್ ಪಾವತಿಸಿ ನೆರವಾದ ಘಟನೆ ನಡೆದಿದೆ.

ಬೆಂಗಳೂರು (ಅ.07): ಚಿಕಿತ್ಸಾ ವೆಚ್ಚ ನೀಡದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಗರ್ಭಿಣಿಯ ಪಾರ್ಥಿವ ಶರೀರ ನೀಡಲು ನಿರಾಕರಿಸಿದ್ದರಿಂದ ಸಂಕಷ್ಟದಲ್ಲಿದ್ದ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದ ಸಚಿವ ಜಮೀರ್ ಅಹಮದ್ ಖಾನ್ 2.5 ಲಕ್ಷ ರು. ಬಿಲ್ ಪಾವತಿಸಿ ನೆರವಾದ ಘಟನೆ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಾಳ್ಯದ ಹಣ್ಣಿನ ವ್ಯಾಪಾರಿ ಜಬಿವುಲ್ಲಾ ಎಂಬುವವರ ಪತ್ನಿ ಫಾತಿಮಾಬಿ (30) 20 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಈ ವೇಳೆ ಅನಾರೋಗ್ಯಕ್ಕೆ ತುತ್ತಾದ ಫಾತಿಮಾಬಿ ಅವರನ್ನು ಹಾಸನದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಪಿ ನಗರದ ಖಾಸಗಿ ಆಸ್ಪತ್ರೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಫಾತಿಮಾಬಿ ಗುರುವಾರ ಮೃತಪಟ್ಟಿದ್ದರು. ಚಿಕಿತ್ಸೆ ನೀಡಿದ್ದಕ್ಕಾಗಿ ಆಸ್ಪತ್ರೆಯು 3.80 ಲಕ್ಷ ರು. ಬಿಲ್ ಮಾಡಿದ್ದು, ಅದನ್ನು ಪಾವತಿಸುವಂತೆ ಫಾತಿಮಾಬಿ ಕುಟುಂಬದವರಿಗೆ ಸೂಚಿಸಿದ್ದರು. ಆದರೆ, ಕುಟುಂಬದವರು ತಮ್ಮ ಬಳಿ 50 ಸಾವಿರ ರು. ಮಾತ್ರ ಇದ್ದು ಅದನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಅದಕ್ಕೊಪ್ಪದ ಆಸ್ಪತ್ರೆ ಸಿಬ್ಬಂದಿ, 3.80 ಲಕ್ಷ ರು. ಪಾವತಿಸಿದರಷ್ಟೇ ಮೃತದೇಹ ನೀಡುವುದಾಗಿ ತಿಳಿಸಿದ್ದರು.
ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ
ಈ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದರಿಂದ ವಿಷಯ ತಿಳಿದ ಜಮೀರ್ ಅಹಮದ್ ಖಾನ್ ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ಬಿಲ್ ಮೊತ್ತದಲ್ಲಿ 80 ಸಾವಿರ ರು. ಕಡಿಮೆ ಮಾಡಿಸಿದ್ದಾರೆ. ನಂತರ ತಾವು ಅಧ್ಯಕ್ಷರಾಗಿರುವ ವಕ್ಫ್ ಕೌನ್ಸಿಲ್ ಫಾರ್ ವುಮೆನ್ಸ್ ಮೂಲಕ 2 ಲಕ್ಷ ರು. ಹಾಗೂ ವೈಯಕ್ತಿಕವಾಗಿ 50 ಸಾವಿರ ರು.ಗಳನ್ನು ಆಸ್ಪತ್ರೆಗೆ ಪಾವತಿಸಿದ್ದಾರೆ. ನಂತರ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ.