ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಲಾಗ್ ಗೇಟ್ ನಿರ್ಮಾಣಕ್ಕೆ ಶ್ರಮಿಸಿದ 28 ಕಾರ್ಮಿಕರಿಗೆ ತಲಾ 50,000 ರುಪಾಯಿ ನೀಡುವುದಾಗಿ ಘೋಷಿಸಿದ ವಸತಿ ಸಚಿವ ಜಮೀರ್‌ ಅಹ್ಮದ್ ಖಾನ್ 

ಹೊಸಕೋಟೆ(ಆ.18): ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಲಾಗ್ ಗೇಟ್ ನಿರ್ಮಾಣಕ್ಕೆ ಶ್ರಮಿಸಿದ 28 ಕಾರ್ಮಿಕರಿಗೆ ತಲಾ 50,000 ರುಪಾಯಿ ನೀಡುವುದಾಗಿ ವಸತಿ ಸಚಿವ ಜಮೀರ್‌ ಅಹ್ಮದ್ ಖಾನ್ ಘೋಷಿಸಿದ್ದಾರೆ. 

ಕಾರ್ಮಿಕರಿಗೆ ಭಾನುವಾರವೇ ಹಣ ವಿತರಣೆಯಾಗಬಹುದು. ಇದೇ ವೇಳೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಕಾರ್ಮಿಕರಿಗೆ ಒಟ್ಟು 2 ಲಕ್ಷ ರು. ನೀಡಿದ್ದಾರೆ.

ಟಿ.ಬಿ ಡ್ಯಾಂ: ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಸಕ್ಸಸ್: ಸಿಎಂಗೆ ಸಚಿವ ಜಮೀರ್‌ ಕರೆ

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿ ಈಗ 68 ಟಿಎಂಸಿ ನೀರು ಉಳಿಸುವ ಪ್ಲಾನ್‌ "ಬಿ " ಸಕ್ಸಸ್ ಆಗಿದೆ. ಹೈದರಾಬಾದ್‌ ಮೂಲದ ಪರಿಣತ ತಜ್ಞ ಕನ್ಹಯ್ಯ ನಾಯ್ಡು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಟ್ಟ ವಚನದಂತೇ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಎಲಿಮೆಂಟ್ ಇಳಿಸಿ ಸಕ್ಸಸ್‌ ಕಂಡಿದ್ದಾರೆ.

ಜಲಾಶಯದ ಮಟ್ಟ 1625 ಅಡಿಯಲ್ಲಿದ್ದಾಗ ಎಲಿಮೆಂಟ್‌ ಇಳಿಸುವ ಪ್ಲಾನ್‌ಅನ್ನು ಕನ್ಹಯ್ಯ ನಾಯ್ಡು ಮಾಡಿದ್ದರು. ಆಗ 76.48 ಟಿಎಂಸಿ ನೀರು ಉಳಿಯುತ್ತಿತ್ತು. ಆದರೆ, ಪ್ರವಾಹದಲ್ಲೇ ಎಲಿಮೆಂಟ್‌ ಇಳಿಸುವ ಕಾರ್ಯಕ್ಕೆ ತಾಂತ್ರಿಕ ತೊಡಕುವುಂಟಾದ ಹಿನ್ನೆಲೆಯಲ್ಲಿ ಈಗ ಪ್ಲಾನ್‌ "ಬಿ " ಫಾರ್ಮುಲಾ ಯಶಸ್ವಿಗೊಳಿಸಿ 68 ಟಿಎಂಸಿ ನೀರು ಉಳಿಸಿದ್ದಾರೆ.

ಪ್ಲಾನ್‌ "ಬಿ " ಯಶಸ್ಸಿಗೆ ಸಜ್ಜು:

ತುಂಗಭದ್ರಾ ಜಲಾಶಯದಲ್ಲಿ 76 ಟಿಎಂಸಿ ನೀರು ಉಳಿಸಿದರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರಿಗೆ ಹಾಗೂ ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೂ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ರೈತರು ಎರಡನೇ ಬೆಳೆಗೂ ನೀರು ಪಡೆಯಬಹುದು ಎಂಬ ಲೆಕ್ಕಾಚಾರ ಹೊಂದಲಾಗಿತ್ತು. ಆದರೆ, ಜಲಾಶಯದ ಕ್ರಸ್ಟ್ ಗೇಟ್‌ ನಂಬರ್‌ 19ಕ್ಕೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸಲು ಹೋದಾಗ ತಾಂತ್ರಿಕ ತೊಡಕು ಉಂಟಾದ್ದರಿಂದ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಇದರಿಂದ 76 ಟಿಎಂಸಿ ನೀರು ಉಳಿಸುವ ಸೂತ್ರ ಸಫಲವಾಗಿರಲಿಲ್ಲ. ಈಗ ಪ್ಲಾನ್‌ "ಬಿ " ಯಶಸ್ವಿಗಾಗಿ ಸ್ಕೈ ವಾಕರ್‌, ಬಿಮ್‌, ಕೇಬಲ್‌ ವೈಯರ್‌ಗಳನ್ನು ತೆರವು ಮಾಡಿ, ನೀರು ಉಳಿಸಿದ್ದಾರೆ.