ಬೆಂಗಳೂರು(ಜ.29): ಇತ್ತೀಚೆಗೆ ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡಿ ನಡಿಗೆದಾರರ ಅಹವಾಲು ಆಲಿಸಿದ್ದ ತೋಟಗಾರಿಕಾ ಸಚಿವ ವಿ.ಸೋಮಣ್ಣ, ಮಂಗಳವಾರ ಸಸ್ಯಕಾಶಿ ಲಾಲ್‌ಬಾಗ್‌ಗೆ ಭೇಟಿ ನೀಡಿ ನಡಿಗೆದಾರರೊಂದಿಗೆ ಚರ್ಚೆ ನಡೆಸಿದರು.

ಬೆಳಗ್ಗೆ ಆರು ಗಂಟೆಗೆ ಉದ್ಯಾನಕ್ಕೆ ಭೇಟಿ ನೀಡಿದ್ದ ಸಚಿವರು, ನಡಿಗೆದಾರರೊಂದಿಗೆ ಇಡೀ ಲಾಲ್‌ಬಾಗ್‌ಅನ್ನು ಒಂದು ಸುತ್ತು ಹಾಕಿದರು. ಬಳಿಕ ಗ್ಲಾಸ್‌ ಹೌಸ್‌, ರೋಜ್‌ ಗಾರ್ಡನ್‌, ಲಾಲ್‌ಬಾಗ್‌ ಕೆರೆ ಮತ್ತು ನಯಾಗಾರ ಜಲಪಾತ ವೀಕ್ಷಿಸಿದರು. ನಡಿಗೆದಾರರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ತಿಳಿಸಿ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ಉದ್ಯಾನವನದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ, ಉದ್ಯಾನದಲ್ಲಿ ಬೀದಿ ವ್ಯಾಪಾರಿಗಳು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಸಾರ್ವಜನಿಕರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅವರು, ಉದ್ಯಾನದ ನಡಿಗೆದಾರರು ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವುದರಿಂದ ಹೊರ ಭಾಗದ ನಾಯಿಗಳು ಉದ್ಯಾನಕ್ಕೆ ಬರುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ, ಆದ್ದರಿಂದ ಸಾರ್ವಜನಿಕರು ನಾಯಿಗಳಿಗೆ ಊಟ ಹಾಕುವುದನ್ನು ನಿಲ್ಲಿಸಬೇಕು ಎಂದರು. ಇದೇ ವೇಳೆ ಬೀದಿ ವ್ಯಾಪಾರಿಗಳನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ 10 ಕಡೆ ಉದ್ಯಾನವನ:

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ, ಬಜೆಟ್‌ನಲ್ಲಿ ತೋಟಗಾರಿಕೆ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಲಾಲ್‌ ಬಾಗನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಈ ಸಂಬಂಧ ಮಾರ್ಚ್‌ 3ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಚರ್ಚಿಸಲಾಗುವುದು. ಮೈಸೂರಿನ 10 ಕಡೆಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು.