ಬೆಂಗಳೂರು(ನ.28): ನಗರದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಮುಂದಿನ ವರ್ಷದ ಜೂನ್‌ ಅಥವಾ ಜುಲೈ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 46,499 ಮನೆಗಳನ್ನು .4,475 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಂಬಂಧ ಈ ಹಿಂದಿನ ಸರ್ಕಾರಗಳು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈಗ 43,867 ಮನೆಗಳನ್ನು ನಿರ್ಮಿಸಲು 6-7 ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. 31 ಸಾವಿರಕ್ಕೂ ಹೆಚ್ಚು ಮನೆಗಳ ಅಡಿಪಾಯ ಮುಗಿದು ಮುಂದಿನ ಕಾರ್ಯ ನಡೆದಿದೆ. 17 ಮನೆಗಳ ಛಾವಣಿ ಮತ್ತು 16 ಮನೆಗಳನ್ನು ಪ್ರಾಯೋಗಿಕ ಆಧಾರದ ಮೇಲೆ ನಿರ್ಮಿಸಲಾಗಿದೆ. ಬಾಕಿ ಉಳಿದ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಡವರಿಗೆ ಸೂರು ಕಲ್ಪಿಸುವುದು ಪುಣ್ಯದ ಕೆಲಸ: ಸಚಿವ ವಿ. ಸೋಮಣ್ಣ

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ. ಶೇ.50 ರಷ್ಟನ್ನು ಶಾಸಕರು ಮತ್ತು ಸಂಸದರು ಶಿಫಾರಸು ಮಾಡಿದವರಿಗೆ ಹಾಗೂ ಉಳಿದ ಶೇ.50 ರಷ್ಟನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಮಧ್ಯಮ, ಬಡ ವರ್ಗದವರಿಗೆ ನೀಡಲಾಗುತ್ತದೆ. ಅವರಿಗೂ ಸಹ ಸ್ಥಳ ತೋರಿಸಿ ಅವರು ಇಚ್ಛೆಪಟ್ಟಸ್ಥಳದಲ್ಲಿಯೇ ಮಂಜೂರು ಮಾಡಲಾಗುವುದು. ಗುತ್ತಿಗೆದಾರರಿಗೆ ಅಧಿಕಾರಿಗಳು ಸಹಕಾರ ನೀಡಬೇಕು. ಕಿರಿಕಿರಿ ನೀಡದೆ ಸಹಕಾರ ನೀಡಬೇಕು. ಪ್ರತಿ ದಿನ ಮಧ್ಯಾಹ್ನದ ಬಳಿಕ ಎರಡು ತಾಸು ಗುತ್ತಿಗೆದಾರರ ಭೇಟಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ನೀಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಅಂತೆಯೇ ಗುತ್ತಿಗೆದಾರರು ಸಹ ಯಾವುದನ್ನೂ ದುರುಪಯೋಗಪಡಿಸಿಕೊಳ್ಳಬಾರದು ಎಂದು ಸೂಚನೆ ನೀಡಿದರು.

ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಮುಂದಿನ 15-20ದಿನದಲ್ಲಿ 300 ಎಕರೆ ಹಸ್ತಾಂತರವಾಗಲಿದೆ. ನಂತರ ಮುಂದಿನ ಹಂತರ ಕಾರ್ಯಗಳನ್ನು ಮಾಡಲಾಗುವುದು. ಯೋಜನೆಯ ಪ್ರಗತಿಯ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಮತ್ತು ನಾನು ಸಹ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಮನೆಗಳ ದರ ನಿಗದಿ ಕುರಿತು ಶೀಘ್ರದಲ್ಲಿಯೇ ಸ್ಪಷ್ಟಚಿತ್ರಣವನ್ನು ತಿಳಿಸಲಾಗುವುದು ಎಂದರು.