'ಬಿಜೆಪಿ ಬಗ್ಗೆ ಮಾತಾಡಲು ಸಿದ್ದರಾಮಯ್ಯ ಯಾರು?'
* ಮುಂದಿನ ಐದು ವರ್ಷ ಸಹ ನಾವೇ ಅಧಿಕಾರದಲ್ಲಿರುತ್ತೇವೆ
* ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಉಮೇಶ ಕತ್ತಿ
* ಸಿದ್ದರಾಮಯ್ಯಗೆ ಬೇರೆ ಕೆಲಸವಿಲ್ಲ. ಹೀಗಾಗಿ ಇಂತಹದ್ದನ್ನು ಮಾಡುತ್ತಿದ್ದಾರೆ
ಬಾಗಲಕೋಟೆ(ಜೂ.02): ಮುಖ್ಯಮಂತ್ರಿ ಆಗುವ ಯೋಗ್ಯತೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೂ ಇಲ್ಲ. ಡಿ.ಕೆ.ಶಿವಕುಮಾರ್‌ಗೂ ಇಲ್ಲ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಬಂದು ಚುನಾವಣೆ ಎದುರಿಸಲಿ ನೋಡೋಣ. ಬಿಜೆಪಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರ್ರಿ? ಯಾರ ಅವಾ..? ಎಂದು ಸಚಿವ ಉಮೇಶ ಕತ್ತಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಖ್ಯಮಂತ್ರಿಗಳಾಗುವ ಅರ್ಹತೆ ಇರುವ ವ್ಯಕ್ತಿಗಳು ಯಾರೂ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
'ಸಿಎಂ ಬದಲಾವಣೆ, ಸಿದ್ದರಾಮಯ್ಯ ಕುತಂತ್ರ'
ಬಿಜೆಪಿ ಸರ್ಕಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸವಿಲ್ಲ. ಹೀಗಾಗಿ ಇಂತಹದ್ದನ್ನು ಮಾಡುತ್ತಿದ್ದಾರೆ. ಆದರೆ ಅವರು ಏನೇ ಮಾಡಿದರೂ ಬರುವ ಎರಡು ವರ್ಷ ಅಧಿಕಾರ ನಡೆಸುವ ಜೊತೆಗೆ ಮುಂದಿನ ಐದು ವರ್ಷವು ಸಹ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಹೇಳಿದರು.
ಯತ್ನಾಳ ಬಗ್ಗೆ ಪ್ರತಿಕ್ರಿಯೆ:
ಪದೇ ಪದೇ ಶಾಸಕ ಯತ್ನಾಳ ನೀಡುತ್ತಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ಉಮೇಶ ಕತ್ತಿ, ನಾನು ವೈಯಕ್ತಿಕವಾಗಿ ಒಬ್ಬೊಬ್ಬರ ಹೆಸರನ್ನು ಹೇಳುವುದಿಲ್ಲ. ಆದರೆ ಎಲ್ಲರ ಮನೆಯಲ್ಲೂ ಎಲ್ಲವೂ ಒಳ್ಳೆಯದು ಇರುವುದಿಲ್ಲ. ಕೆಲವರ ಮನೆಯಲ್ಲಿ ಅನ್ನ, ಮೊಸರು ಇದ್ದರೆ ಇನ್ನೊಬ್ಬರ ಮನೆಯಲ್ಲಿ ಹೊಳಿಗೆ ಇರುತ್ತದೆ. ಇದಕ್ಕೇನೂ ಮಾಡುವುದಕ್ಕಾಗುವುದಿಲ್ಲ. ಬಿಜೆಪಿ ನಾಯಕರು ದೆಹಲಿಗೆ ಹೋಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಹಾಸ್ಯವಾಗಿ ಮಾತನಾಡಿದ ಕತ್ತಿ, ಯಾರೋ ಹೋಗುತ್ತಾರೆ ಅಂತ ಬಸ್‌ಸ್ಟ್ಯಾಂಡಿಗೆ ಹೋಗುವುದಕ್ಕೆ ಆಗುವುದಿಲ್ಲ. ನಾನಂತೂ ಹೋಗುವುದಿಲ್ಲ. ಹೋಗುವುದಾದರೆ ನಿಮಗೆಲ್ಲ ಹೇಳಿ ಹೋಗುತ್ತೇನೆ ಎಂದು ಹೇಳಿದರು.
ನಾನು ದೇವರ ಮಗನೂ ಅಲ್ಲ:
ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಪ್ರಕಟಿಸುವ ವಿಷಯದಲ್ಲಿ ಅಧಿಕಾರಿಗಳು ವ್ಯತ್ಯಾಸ ಮಾಡಿದ್ದಾರೆ ಎಂಬ ಪ್ರಶ್ನೆಗೆ ನಾನು ದೇವರ ಮಗನೂ ಅಲ್ಲ, ಡಾಕ್ಟರ್ ಕೂಡ ಅಲ್ಲ. ಅಧಿಕಾರಿಗಳು ಹೇಳಿದ್ದನ್ನೇ ಹೇಳುತ್ತಿದ್ದೇನೆ. 35 ವರ್ಷ ಶಾಸಕನಾಗಿ, ಮಂತ್ರಿಯಾಗಿ ಸಾಕಷ್ಟುಅನುಭವ ನನಗಿದೆ. ಬಾಗಲಕೋಟೆ ಜಿಲ್ಲೆ ನನಗೆ ಹೊಸದೇನಲ್ಲ. ಪ್ರತಿದಿನ ಅಧಿಕಾರಿಗಳಿಂದ ಮಾಹಿತಿ ನನಗೆ ಬರುತ್ತದೆ. ಹಾಗಂತ ಅಧಿಕಾರಿಗಳು ನನ್ನನ್ನು ಮಿಸ್‌ಯೂಜ್ ಮಾಡಲು ಸಾಧ್ಯವಿಲ್ಲ. ಮಾಡಿದರೆ ಕ್ರಮ ಖಂಡಿತ ಎಂದು ಅಧಿಕಾರಿಗಳಿಗೆ ಎ ಚ್ಚರಿಕೆ ನೀಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಪಾಜಿಟಿವಿಟಿ ಪ್ರಮಾಣ ಶೇ.8.91 ಇದೆ. ಈವರೆಗೆ ಎರಡನೇ ಅಲೆಯಲ್ಲಿ 145 ಜನ ಸಾವಿಗೀಡಾಗಿದ್ದಾರೆ. ಜಿಲ್ಲಾಡಳಿತಕ್ಕೆ ಆರ್‌ಟಿಪಿಸಿಆರ್ ಪರೀಕ್ಷೆ ಮಾತ್ರ ಅಂತಿಮವಾಗಿರುತ್ತದೆ. ಹಾಗಂತ ಸಿಟಿ ಸ್ಕ್ಯಾನ್‌ನಲ್ಲಿ, ಮನೆಯಲ್ಲಿ ಸತ್ತರೆ, ತೋಟದಲ್ಲಿ ಸತ್ತರೆ, ಎದೆಗೆ ಕಫ ಬಂದು ಸತ್ತರೆ ಲೆಕ್ಕಕ್ಕೆ ಬರುವುದಿಲ್ಲ ಎಂದು ಹೇಳಿದರು.