Asianet Suvarna News Asianet Suvarna News

ರಾಯಚೂರು ವಿಮಾನ ನಿಲ್ದಾಣ: ಈ ವರ್ಷದಲ್ಲೇ ಕಾಮಗಾರಿ

ಕಾಂಗ್ರೆಸ್‌ ಸದಸ್ಯ ಬಸವನಗೌಡ ದದ್ದಲ ಪ್ರಶ್ನೆಗೆ ಸಚಿವ ಸುರೇಶ್‌ ಕುಮಾರ್‌ ಉತ್ತರ| ರಾಯಚೂರು ಜಿಲ್ಲೆ ಯರಮರಸ್‌ನಲ್ಲಿ ವಿಮಾನ ನಿಲ್ದಾಣಕ್ಕಾಗಿ 400 ಎಕರೆ ಭೂಸ್ವಾಧೀನ| ವಿಮಾನ ನಿಲ್ದಾಣ ಇಲ್ಲದ ಕಾರಣಕ್ಕಾಗಿ ಜಿಲ್ಲೆಗೆ ಆಗಮಿಸದ ಉದ್ಯಮಿಗಳು| 

Minister Suresh Kumar Talks Over Raichur Airport grg
Author
Bengaluru, First Published Mar 11, 2021, 1:58 PM IST

ರಾಯಚೂರು(ಮಾ.11): ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 400 ಎಕರೆ ಭೂಸ್ವಾಧೀನವಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಮಗಾರಿಯನ್ನು ಕೈಗೊಳ್ಳುವ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಬಸವನಗೌಡ ದದ್ದಲ ಪ್ರಶ್ನೆಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆನಂದ್‌ ಸಿಂಗ್‌ ಪರವಾಗಿ ಉತ್ತರ ನೀಡಿದ ಅವರು, ರಾಯಚೂರು ಜಿಲ್ಲೆ ಯರಮರಸ್‌ನಲ್ಲಿ ವಿಮಾನ ನಿಲ್ದಾಣಕ್ಕಾಗಿ 400 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಸ್ವಾಧೀನ ಮಾಡಿಕೊಂಡಿರುವ ಜಮೀನಿನ ಸುತ್ತಲು ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ, ವಿದ್ಯುತ್‌ ಮಾರ್ಗಗಳು ಮತ್ತು ಎತ್ತರದ ಚಿಮಿನಿಗಳು ಇರುವುದುರಿಂದ ವಿಮಾನ ಹಾರಾಟಕ್ಕೆ ಅಡಚಣೆ ಉಂಟಾಗಲಿದೆ. ಹೀಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಜ್ಞರ ತಂಡವು ಇದೇ ತಿಂಗಳಲ್ಲಿ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಲು ಆಗಮಿಸಲಿದೆ. ತಂಡದ ವರದಿಯನ್ನು ಆಧರಿಸಿ ಯೋಜನಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು. 20 ಆಸನವುಳ್ಳ ವಿಮಾನ ಹಾರಾಟ ನಡೆಸಬಹುದಾಗಿದೆ. ಕೆಎಸ್‌ಎಸ್‌ಐಡಿಸಿ ನೊಡೇಲ್‌ ಏಜೆನ್ಸಿಯಾಗಿದೆ ಎಂದು ಮಾಹಿತಿ ನೀಡಿದರು.

ರಾಯಚೂರು: ಮಹಾ ಶಿವರಾತ್ರಿ, ಮಂತ್ರಾಲಯದ ರಾಯರ ಮಠದಲ್ಲಿ ರುದ್ರಾಭಿಷೇಕ

ವಿಮಾನ ನಿಲ್ದಾಣ ಇಲ್ಲದ ಕಾರಣಕ್ಕಾಗಿ ಉದ್ಯಮಿಗಳು ಜಿಲ್ಲೆಗೆ ಆಗಮಿಸುತ್ತಿಲ್ಲ. ಅಲ್ಲದೇ, ಕೇಂದ್ರದಿಂದ ಮಂಜೂರಾಗಿದ್ದ ಐಐಐಟಿ ಸಹ ಧಾರವಾಡಕ್ಕೆ ಸ್ಥಳಾಂತರಗೊಂಡಿತು. ಬಜೆಟ್‌ನಲ್ಲಿಯೂ ಸಹ ಅನುದಾನ ನೀಡಿಲ್ಲ ಎಂದು ಬಸವನಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್‌ ಸವದಿ ಅವರ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ .50 ಕೋಟಿ ಮೀಸಲಿಡಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿ .12 ಕೋಟಿ ಇದೆ. ಒಟ್ಟು .62 ಕೋಟಿ ಇದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಂಡು ಮುಂದಿನ ಬಜೆಟ್‌ನಲ್ಲಿ ಹಣಕಾಸು ನೆರವು ಒದಗಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿನ ಹಣ ಬಳಕೆಗೆ ಆ ಭಾಗದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾಮಧೇನು ಅಲ್ಲ, ನಿಗದಿತ ಹಣ ಬಳಕೆ ಮಾಡಲು ಅವಕಾಶ ಇದೆ. ಮಂಡಳಿಯ ಹಣವನ್ನು ಬಳಕೆ ಮಾಡದೆ, ಸರ್ಕಾರವು ಹಣ ನೀಡಬೇಕು ಎಂದು ಒತ್ತಾಯಿಸಿದರು. ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ತಾಂತ್ರಿಕ ರನ್‌ವೇ ಕ್ಲಿಯರೆನ್ಸ್‌ ಆಗಬೇಕು. ಅದನ್ನು ಸರ್ಕಾರವು ತೆಗೆದುಕೊಂಡಿಲ್ಲ. ಅಲ್ಲದೇ, ಡಿಜಿಸಿಎನಿಂದಲೂ ಕ್ಲಿಯರೆನ್ಸ್‌ ತೆಗೆದುಕೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
 

Follow Us:
Download App:
  • android
  • ios