ಆರ್‌ಸಿಬಿ ಫ್ಯಾನ್ಸ್ ಕಾದು ಕುಳಿತಿದ್ದೇ ಬಂತು, ಕೆಎಲ್ ರಾಹುಲ್ ಸೋಲ್ಡ್ ಔಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕನ್ನಡಿಗ ಕೆಎಲ್ ರಾಹುಲ್ ಖರೀದಿ ಮಾಡುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಆದರೆ ಹರಾಜಿನಲ್ಲಿ ಆರ್‌ಸಿಬಿ ಮಾತ್ರ ಜಾಣ ಮೌನವಹಿಸಿದೆ. ಇದೀಗ ರಾಹುಲ್ ಕೂಡ ಕೈತಪ್ಪಿದ್ದಾರೆ.
ಜೆಡ್ಡಾ(ನ.24) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳ ಆಕ್ರೋಶ ಹೆಚ್ಚಾಗುತ್ತಿದೆ. ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್ ಬಳಿಕ ಇದೀಗ ಕನ್ನಡಿಗ ಕೆಎಲ್ ರಾಹುಲ್ ಖರೀದಿಸಲು ಆರ್‌ಸಿಬಿಗೆ ಸಾಧ್ಯವಾಗಿಲ್ಲ. ಕೆಎಲ್ ರಾಹುಲ್ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಆರ್‌ಸಿಬಿಯ ನಡೆಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಉತ್ತಮ ಆಟಗಾರರನ್ನು ಆರ್‌ಸಿಬಿ ಖರೀದಿಸುತ್ತಿಲ್ಲ ಅನ್ನೋ ಹಲವು ವರ್ಷಗಳ ಆರೋಪ ಮತ್ತೆ ಸಾಬೀತಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಆರ್‌ಸಿಬಿ ಇದುವರೆಗೆ ಖರೀದಿಸಿದ್ದು ಕೇವಲ ಒಬ್ಬ ವಿದೇಶಿ ಆಟಗಾರನ ಮಾತ್ರ. ಲಿಯಾಮ್ ಲಿವಿಂಗ್‌ಸ್ಟೋನ್‌ಗೆ 8.75 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಖರೀದಿ ಮಾಡಿತು. ಆದರೆ ಇತರ ಪ್ರಮುಖ ಆಟಗಾರರ ಬಿಡ್ಡಿಂಗ್ ವೇಳೆ ಲಾಸ್ಟ್ ಬೆಂಚ್‌ಲ್ಲಿ ಕುಳಿತು ಒಲ್ಲದ ಮನಸ್ಸಿನಿಂದ ಬಿಡ್ಡಿಂಗ್ ಬೋರ್ಡ್ ಎತ್ತಿ ಹಿಡಿಯುವ ಪ್ರಯತ್ನ ಮಾಡಿತ್ತು. ಅಭಿಮಾನಿಗಳ ಮುಂದೆ ತಾವು ಬಿಡ್ಡಿಂಗ್‌ನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ತೋರಿಸಿಕೊಂಡರು ಖರೀದಿ ಮಾತ್ರ ತೃಪ್ತಿ ನೀಡಿಲ್ಲ.
ಈ ಬಾರಿಯ ಹರಾಜಿನಲ್ಲೂ ಮಂಕಾಯ್ತಾ ಆರ್‌ಸಿಬಿ? ಕೈತಪ್ಪಿದ ಸಿರಾಜ್, ಚಹಾಲ್ !
ಕೆಎಲ್ ರಾಹುಲ್ ಈ ಬಾರಿ ಮತ್ತೆ ಆರ್‌ಸಿಬಿ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ರಾಹುಲ್ ಕೂಡ ಪರೋಕ್ಷವಾಗಿ ಆರ್‌ಸಿಬಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾತ್ರ ಬೇರೆ ಪ್ಲಾನ್‌ನಲ್ಲಿದೆ. ಇದಕ್ಕೂ ಮೊದಲು ಆರ್‌ಸಿಬಿಯ ಭಾಗವಾಗಿದ್ದ ವೇಗಿ ಮೊಹಮ್ಮದ್ ಸಿರಾಜ್ ಖರೀದಿಗೆ ಆರ್‌ಸಿಬಿ ಹಿಂದೇಟು ಹಾಕಿತ್ತು. ಹೊಂಚು ಹಾಕಿದ್ದ ಗುಜರಾತ್ ಟೈಟಾನ್ಸ್ 12.25 ಕೋಟಿ ರೂಪಾಯಿ ನೀಡಿ ಸಿರಾಜ್ ಖರೀದಿಸಿತು. ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ಸಿರಾಜ್‌ನ ರಿಟೇನ್ ಮಾಡಿಕೊಂಡಿತ್ತು. ಆದರೆ ಈ ಬಾರಿ ಸಿರಾಜ್‌ನ ತಂಡದಿಂದ ಕೈಬಿಟ್ಟಿತ್ತು.
ಹರಾಜಿನಲ್ಲಿ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ಖರೀದಿ ಮಾಡುವ ಭರವಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಆದರೆ ಚಹಾಲ್, ಸಿರಾಜ್, ಕೆಎಲ್ ರಾಹುಲ್ ಯಾರನ್ನೂ ಆರ್‌ಸಿಬಿ ಖರೀದಿಸಿಲ್ಲ. ಈ ರೀತಿ ಆಟಗಾರರನ್ನು ಕೈಬಿಟ್ಟರೆ ಈ ಬಾರಿಯೂ ಆರ್‌ಸಿಬಿ ಕಪ್ ಗೆಲ್ಲಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆರ್‌ಸಿಬಿ ತಂಡದಲ್ಲಿ ಕನ್ನಡಿಗರೇ ಇರಲ್ಲ ಅನ್ನೋ ಆರೋಪಕ್ಕೆ ರಾಹುಲ್ ಖರೀದಿ ಉತ್ತರವಾಗುತ್ತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡೆ ಇದೀಗ ಅನುಮಾನಗಳಿಗೆ ಕಾರಣವಾಗುತ್ತಿದೆ.