ಗಂಗಾವತಿ(ಏ.30): ಕೊಪ್ಪಳ ಜಿಲ್ಲೆಯಲ್ಲಿ 397 ಕೊರೋನಾ ಪಾಸಿಟಿವ್‌ ಪ್ರಕರಣ ಬರುವ ಸಾಧ್ಯತೆ ಇದ್ದು, ಅದರಲ್ಲಿ 19 ಜನರು ಸಾಯುವ ಸಂಭವ ಇದೆ..! ಇಲ್ಲಿಯ ಸರಕಾರಿ ಉಪ ವಿಭಾಗದ ಆಸ್ಪತ್ರೆಯ ಆಡಾಳಿತಾಧಿಕಾರಿ ಹಾಗೂ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ ಇಂಥದೊಂದು ಹೇಳಿಕೆ ನೀಡಿ​ ವಿವಾದಕ್ಕೆ ವಿವಾದಕ್ಕೆ ಸಿಲುಕುವ ಜತೆಗೆ ಸರ್ಕಾರ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಗರ ಪೊಲೀಸ್‌ ಠಾಣೆಯ ಆವರಣದಲ್ಲಿ ಕೊರೋನಾ ಕುರಿತ ಜಾಗೃತಿ ಸಭೆಯಲ್ಲಿ ಮಾತನಾಡುತ್ತ, ಸಂಸ್ಥೆಯೊಂದರ ಸರ್ವೇ ಪ್ರಕಾರ ಜಿಲ್ಲೆಯಲ್ಲಿ, 397 ಕೊರೋನಾ ಪಾಸಿಟಿವ್‌ ಪ್ರಕರಣ ಬರುವ ಸಾಧ್ಯತೆ ಇದೆ. 19 ಜನರು ಸಾಯುವ ಸಂಭವ ಇದೆ ಎಂದು ಹೇಳಿ ಸರ್ಕಾರ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೊರೋನಾ ಕಾಟ: ಮೃತ ಶಂಕಿತ ವ್ಯಕ್ತಿಯ ವರದಿ ನೆಗೆಟಿವ್‌, ನಿಟ್ಟುಸಿರು ಬಿಟ್ಟ ಕೊಪ್ಪಳದ ಜನತೆ

ವೈದ್ಯರಾದವರು ಜನರಲ್ಲಿ ಜಾಗೃತಿ ಮೂಡಿಸಿ ಪರಿಹಾರ ಕಂಡುಕೊಳ್ಳಬೇಕೇ ಹೊರತು ಭಯ ಪಡಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್‌ ಆಗಿದ್ದರಿಂದ ಜಿಲ್ಲೆಯ ಜನರು ಕೆಲಸ, ಆದಾಯ ಇಲ್ಲದೇ ತೊಂದರೆಗೀಡಾಗಿದ್ದಾರೆ. ಕೊರೋನಾ ಮಹಾಮಾರಿಗೆ ಬೆಚ್ಚಿ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರಾದವರು ಇಂತಹ ಅಸಂಬದ್ಧ ಯಾವುದೇ ಆಧಾರಗಳಿಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರ್ಜುನ್‌ ನಾಯಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವೈದ್ಯರ ಹೇಳಿಕೆಯಿಂದ ಜನರಲ್ಲಿ ಆತಂಕ​ವುಂಟಾಗಿದೆ. ಅವರು ಸಲಹೆ ನೀಡಬೇಕೇ ಹೊರತು ಸಂಸ್ಥೆಯೊಂದು ಸ​ರ್ವೇ ಮಾಡಿದ ವರದಿ ಪ್ರಕಟಿಸಿ ಜನರಲ್ಲಿ ಆತಂಕ ಮೂಡಿಸಿದ್ದಾರೆ. ವೈದ್ಯರ ಹೇಳಿಕೆ ಸಮಂಜಸವಾದದ್ದಲ್ಲ ಎಂದು ಅರ್ಜುನ್‌ ನಾಯಕ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಶಾಸಕರು, ಪೊಲೀಸ್‌ ಉಪ ವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ಇಂತಹ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ವೈದ್ಯಾದಿಕಾರಿಗಳಿಗೆ ಅದೆಷ್ಟುಜವಾಬ್ದಾರಿ ಇದೆ ಎಂದು ತೋರುತ್ತದೆ ಎಂದು ತಿಳಿಸಿದ್ದಾರೆ.

ವದಂತಿ​ಯಿಂದ ಭಯ ಪಡ​ಬೇ​ಡಿ

ಜಿಲ್ಲೆಯಲ್ಲಿ ಕೋವಿಡ್‌ -19 ಸೊಂಕು ತಗ​ಲುವ ಭೀತಿ ಇದೆ ಎಂಬ ವದಂತಿಗೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ವರದಿ ನೀಡುತ್ತಾರೆ. ಕೆಲವರು ಸುಳ್ಳು ಸುದ್ದಿ ಹುಟ್ಟಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕಾರಣ ಕೋವಿಡ್‌ ಬಗ್ಗೆ ಜಿಲ್ಲಾಧಿಕಾರಿಗಳನ್ನು ಹೊರತು ಪಡಿಸಿ ಯಾವ ಅಧಿಕಾರಿಗಳೂ ಹೇಳಿಕೆ ನೀಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೇಳಿಕೆ ಪರಿಶೀಲನೆ: ಸಚಿವ ಸುರೇಶಕುಮಾರ

ಕೋವಿ​ಡ್‌-19 ಸೋಂಕಿನ ಕುರಿ​ತಂತೆ ನೀಡಿ​ರುವ ವೈದ್ಯರ ಹೇಳಿಕೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಕ ಸಚಿವ ಹಾಗೂ ಕೋವಿಡ್‌ ಮಾಹಿತಿ ವಕ್ತಾರರಾಗಿರುವ ಸುರೇಶ ಕುಮಾರ ತಿಳಿಸಿದ್ದಾರೆ. ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 397 ಜನರಿಗೆ ಸೊಂಕು ಮತ್ತು 19 ಜನ ಸಾವನ್ನಪ್ಪುತ್ತಾರೆ ಎಂಬ ವರದಿ ಪ್ರಕಟಗೊಂಡಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೂಡಲೇ ಸಂಬಂಧ ಪಟ್ಟ ವೈದ್ಯಾಧಿಕಾರಿಗಳೊಂದಿಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.