Asianet Suvarna News Asianet Suvarna News

ಕೊಪ್ಪಳ: ಪರೀಕ್ಷಾ ಸಿದ್ಧತಾ ಕಿರುಚಿತ್ರಕ್ಕೆ ಶಹಬ್ಬಾಸ್‌ ಎಂದ ಸಚಿವ ಸುರೇಶ ಕುಮಾರ್‌

ಕೊಪ್ಪಳ ಜಿಲ್ಲಾಡಳಿತದ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆ| ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌| ಶಿಕ್ಷಕರ ಪರಿಕಲ್ಪನೆ, ಶಿಕ್ಷಕರಿಂದಲೇ ನಿರ್ಮಾಣ| ಇಂಥದ್ದೊಂದು ಪರಿಕಲ್ಪನೆಯನ್ನು ಮಾಡಿದ ಶಿಕ್ಷಕರಿಗೆ ಗ್ರೇಟ್‌ ಎಂದ ಸಚಿವ ಸುರೇಶ ಕುಮಾರ|

Minister Suresh Kumar Appreciation of Preparation of the Exam Short Movie
Author
Bengaluru, First Published Jun 14, 2020, 8:24 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.14): ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಕುರಿತು ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಶಿಕ್ಷಕರ ಪರಿಕಲ್ಪನೆಯಲ್ಲಿಯೇ ಸಿದ್ಧವಾಗಿರುವ ‘ಶ್ರೀರಕ್ಷೆ’ ಎನ್ನುವ ಕಿರುಚಿತ್ರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್‌ ಶಹಬ್ಬಾಸ್‌ ಎಂದಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿಯಾಗಿಯೇ ಹವಾ ಮಾಡುತ್ತಿದೆ.

ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ, ಜಿಪಂ ಸಿಇಒ ರಘುನಂದನ್‌ ಮೂರ್ತಿ ಹಾಗೂ ಡಿಡಿಪಿಐ ದೊಡ್ಡಬಸಪ್ಪ ನೀರಲೂಟಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರ ಪರಿಕಲ್ಪನೆಯಲ್ಲಿಯೇ ಸಿದ್ಧವಾಗಿರುವ ಈ ಕಿರುಚಿತ್ರ ಎಸ್‌ಎಸ್‌ಎಲ್‌ಸಿ ಮಕ್ಕಳಲ್ಲಿ ಇರುವ ಕೊರೋನಾ ಭಯ ನಿವಾರಣೆ ಮಾಡುತ್ತದೆ. ಅಲ್ಲದೆ ಪಾಲಕರಲ್ಲಿಯೂ ತಮ್ಮ ಮಕ್ಕಳು ಅಚ್ಚುಕಟ್ಟಾಗಿರುವ ಪರೀಕ್ಷಾ ಕೇಂದ್ರಕ್ಕೆ ಧೈರ್ಯದಿಂದ ಕಳುಹಿಸಲು ಮನಸ್ಸು ಮಾಡುವಂತಿದೆ.

ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

ಏನಿದೆ ಚಿತ್ರದಲ್ಲಿ?

ಶಿಕ್ಷಕ ಹನುಮಂತಪ್ಪ ಕುರಿ ಅವರ ಪರಿಕಲ್ಪನೆಯಲ್ಲಿ ಶಿಕ್ಷಕ ಸುರೇಶ ಕಂಬಳಿ ಅವರು ನಿರ್ವಹಣೆ ಮಾಡಿರುವ ಈ ಶ್ರೀರಕ್ಷೆ ಎನ್ನುವ ಕಿರುಚಿತ್ರಕ್ಕೆ ಶಿಕ್ಷಕಿ ಬಾಲನಾಗಮ್ಮ ಡಿ. ಅವರು ಧ್ವನಿ ನೀಡಿದ್ದಾರೆ. ಇನ್ನು ಅವಿನಾಶ ಚವ್ಹಾಣ ಎನ್ನುವವರು ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ಹೇಗೆ ನಡೆಯುತ್ತವೆ? ವಿದ್ಯಾರ್ಥಿಗಳಿಗೆ ಸುರಕ್ಷತೆ ಏನು? ಕೊಠಡಿ ವ್ಯವಸ್ಥೆ ಹೇಗೆ? ಪರೀಕ್ಷಾ ಕೇಂದ್ರದಲ್ಲಿ ಅನುಸರಿಸಬೇಕಾದ ತುರ್ತು ಕ್ರಮಗಳು, ಮುಂಜಾಗ್ರತೆಗಳು ಏನು? ಎನ್ನುವುದು ಸೇರಿದಂತೆ ಪಾಲಕರಲ್ಲಿ ಮೂಡಬಹುದಾದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಂಡು ಜಿಲ್ಲಾಡಳಿತ ಮಾದರಿ ಕೇಂದ್ರದ ಚಿತ್ರೀಕರಣ ಮಾಡಿದೆ. ಇಡೀ ಚಿತ್ರದುದ್ದತ್ತೂ ಎಳೆ ಎಳೆಯಾದ ಮಾಹಿತಿ, ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ನಡೆದುಕೊಳ್ಳಬಹುದಾದ ರೀತಿಯನ್ನು ವೀಡಿಯೋ ಸಮೇತ ತೋರಿಸಲಾಗಿದೆ.

ಫುಲ್‌ ಹವಾ:

ಈ ಶ್ರೀರಕ್ಷೆ ಚಿತ್ರ ಈಗ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಹವಾ ಮಾಡುತ್ತಿದೆ. ಪ್ರತಿ ವಿದ್ಯಾರ್ಥಿ ಮತ್ತು ಪಾಲಕರು ನೋಡಲೇಬೇಕಾದ ಈ ಚಿತ್ರದ ಕುರಿತು ವ್ಯಾಪಕ ಪ್ರಸಂಶೆ ವ್ಯಕ್ತವಾಗುತ್ತಿದೆ. ಇದಕ್ಕಿಂತ ಮಿಗಿಲಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನೆ ಮಾಡುವವರು ಈಗ ಸೋಷಿಯಲ್‌ ಮೀಡಿಯಾದಲ್ಲಿ ಪರೀಕ್ಷೆಗಳನ್ನು ನಡೆಸಬಹುದು ಎನ್ನುವಂತೆ ಮಾಡಿದೆ ಕಿರುಚಿತ್ರ.

ಶಹಬ್ಬಾಸ್‌ ಎಂದ ಸಚಿವರು:

ಈ ಕಿರುಚಿತ್ರವನ್ನು ನೋಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಕೊಪ್ಪಳ ಜಿಲ್ಲಾಡಳಿತದ ಪ್ರಯತ್ನಕ್ಕೆ ಶಹಬ್ಬಾಸ್‌ ಎಂದಿದ್ದಾರೆ. ಇಂಥದ್ದೊಂದು ಪರಿಕಲ್ಪನೆಯನ್ನು ಮಾಡಿದ ಶಿಕ್ಷಕರಿಗೆ ಗ್ರೇಟ್‌ ಎಂದಿದ್ದಾರೆ. ಈ ಕುರಿತು ಅವರೇ ಕೊಪ್ಪಳ ಜಿಲ್ಲಾಧಿಕಾರಿಗೆ ಮತ್ತು ಜಿಪಂ ಸಿಇಒ ಅವರಿಗೆ ಕರೆ ಮಾಡಿ ಶಹಬ್ಬಾಸ್‌ ಹೇಳಿದ್ದಾರೆ. ಒಳ್ಳೆಯ ಕಾರ್ಯ ಮಾಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕುರಿತು ಕೊಪ್ಪಳ ಜಿಲ್ಲಾಡಳಿತ ಮಾಡಿದ ಕಿರುಚಿತ್ರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಡಿಸಿ ಪಿ. ಸುನೀಲ್‌ಕುಮಾರ ಅವರು ಹೇಳಿದ್ದಾರೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಯ ಕುರಿತು ಕಿರುಚಿತ್ರ ಮಾಡುವುದಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ ಮೊದಲು ಧನ್ಯವಾದ ಹೇಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅನುಕೂಲವಾದರೆ ಅದುವೆ ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ಕಿರು​ಚಿ​ತ್ರದ ಪರಿ​ಕ​ಲ್ಪ​ನೆ ಮಾಡಿದ ಶಿಕ್ಷಕ ನುಮಂತಪ್ಪ ಕುರಿ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios