ಪಿಎಫ್‌ಐಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗ್ಗು ಬಡಿಯುತ್ತದೆ, ದೇಶದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವಾಗಿದೆ ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಹೇಳಿದರು. 

ಉಡುಪಿ (ಸೆ.25): ಪಿಎಫ್‌ಐಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗ್ಗು ಬಡಿಯುತ್ತದೆ, ದೇಶದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವಾಗಿದೆ ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಹೇಳಿದರು. ಅವರು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ದೇಶಾದ್ಯಂತ ಪಿಎಫ್‌ಐ ಕಚೇರಿ ಮೇಲೆ ನಡೆದ ಎನ್‌ಐಎ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದರು. ಪ್ರವೀಣ್‌ ನೆಟ್ಟಾರು ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಾಗಿ ಹೇಳಿದ್ದೆವು. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನು ನೀಡಿದ್ದೆವು, ಪ್ರಕರಣವನ್ನು ಎನ್‌ಐಎಗೆ ಕೊಟ್ಟು ಸರ್ಕಾರ ಕೈಕಟ್ಟಿಕುಳಿತಿಲ್ಲ ಎಂದರು.

ಕಾಂಗ್ರೆಸಿಗೆ ನೈತಿಕತೆ ಇಲ್ಲ: ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ಆಧಾರರಹಿತ ಆರೋಪ ಮಾಡುತ್ತಿದೆ. ಪೇ ಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸರಮಾಲೆಯಾಗಿದೆ. ಪೋಸ್ಟರ್‌ ಅಂಟಿಸಿದ ಕಾಗ್ರೆಸ್‌ನ ನಾಯಕ ಡಿ.ಕೆ.ಶಿ. ಇತ್ತೀಚೆಗೆ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಭ್ರಷ್ಟಾಚಾರ ಬಗ್ಗೆ ತನಿಖೆಗೊಳಪಟ್ಟಿರುವ ಕಾಂಗ್ರೆಸಿನ ನಾಯಕರಿಗೆ ಪೇ ಸಿಎಂ ಪೋಸ್ಟರ್‌ ಅಂಟಿಸಲು ಯಾವ ನೈತಿಕತೆ ಇದೆ, ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದರು.

ಟೆಂಪೋ ಏರಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಉಡುಪಿ ಜಿ.ಪಂ ಸಿಇಒ

ಸಿದ್ರಾಮಯ್ಯ ಪಿತಾಮಹ: ಅರ್ಕಾವತಿ, ಇಂದಿರಾ ಕ್ಯಾಂಟೀನ್‌, ಹಾಸಿಗೆ ಹಗರಣದಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್‌ ಸಿಎಂ ಬಗ್ಗೆ ಮಾತನಾಡುತ್ತಾರೆ. ಆದರೆ 10 ದಿನದ ಅಧಿವೇಶನದಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆಸಿಲ್ಲ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಇಲ್ಲ, ನಿಗದಿತ ಸಮಯದಲ್ಲಿ ಚುನಾವಣೆ ಆಗುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗುತ್ತೇವೆ. ಮುಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಚುನಾವಣೆ ನೇತೃತ್ವ ವಹಿಸುತ್ತಾರೆ ಎಂದು ಜೆಪಿ ನಡ್ಡಾ ಅವರೇ ಹೇಳಿದ್ದಾರೆ. ಅದಕ್ಕೆ ನಮ್ಮ ಸಹಮತ ವ್ಯಕ್ತಪಡಿಸಿದ್ದೇವೆ. ನವರಾತ್ರಿ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

Udupi; ಹೊಟ್ಟೆ ತುಂಬಾ ಬಂಗುಡೆ ಮೀನು, ನಾಡದೋಣಿಗಳಲ್ಲಿ ಮಿಲ್ಕ್ ತಾಟೆ ಮೀನಿನ ಸುಗ್ಗಿ

ನಾಡಗೀತೆಗೆ ಸದಭಿಪ್ರಾಯ: ಕಳೆದ 18 ವರ್ಷಗಳಿಂದ ನಾಡಗೀತೆಯ ಬಗ್ಗೆ ಸ್ಪಷ್ಟನಿಲುವಿರಲಿಲ್ಲ. ಈಗ ನಮ್ಮ ಸರ್ಕಾರ ಸ್ಪಷ್ಟನಿಲುವಿಗೆ ಬಂದಿದೆ. ವಿದುಷಿ ಎಸ್‌.ಆರ್‌. ಲೀಲಾವತಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2.30 ನಿಮಿಷಗಳಲ್ಲಿ ನಾಡಗೀತೆ ಹಾಡಲಾಗುತ್ತದೆ. ಕುವೆಂಪು ಅವರು ಬರೆದ ಈ ನಾಡಗೀತೆಯಲ್ಲಿ ಯಾವುದೇ ಶಬ್ದವನ್ನು ಕಡಿತ ಮಾಡಿಲ್ಲ. ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ, ಬರಗೂರು, ಭೈರಪ್ಪ ಮುಂತಾದವರಿಂದ, ಸಾಂಸ್ಕೃತಿಕ, ಸಾಹಿತ್ಯ ವಲಯದಲ್ಲಿ ಈ ಬಗ್ಗೆ ಸದಾಭಿಪ್ರಾಯ ಬಂದಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.