ಕಾರವಾರ (ಸೆ.10): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೆ.3ರಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂಬ ಆರೋಪ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ತನಿಖೆಗೆ ಆದೇಶಿಸಿದ್ದಾರೆ.

ಬಾಣಂತಿ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟಿರುವುದು ತಮಗೂ ನೋವನ್ನುಂಟು ಮಾಡಿದೆ. ವೈದ್ಯರ ನಿರ್ಲಕ್ಷ್ಯದಿಂದ ಆಕೆ ಮೃತಪಟ್ಟಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಕುರಿತು ಇಲಾಖೆ ಕಾರ‍್ಯದರ್ಶಿಗೆ ಕ್ರಮಕ್ಕೆ ಸೂಚಿಸಿದ್ದು, ಸರ್ಕಾರ ಆ ಕುಟುಂಬದ ಜತೆಗಿದೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಸಚಿವರು ಭರವಸೆ ನೀಡಿದರು.

ಹೆಣ್ಣು ಮಗುವಿಗೆ ಸೆ.3ರಂದು ಜನ್ಮ ನೀಡಿದ್ದ ಸರ್ವೋದಯ ನಗರದ ಗೀತಾ ಬಾನಾವಳಿ(28) ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವಾಗ ಮೃತಪಟ್ಟಿದ್ದಳು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟಿಸಿದ್ದರು.