‘ಯಾರನ್ನು ಉಳಿಸುವ ಪ್ರಶ್ನೆಯೇ ಇಲ್ಲ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ'
ಯಾರೇ ತಪ್ಪುಮಾಡಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.
ಮೈಸೂರು (ಆ.22): ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಂಬಂಧ ಯಾರನ್ನು ಉಳಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದ ಕೆ.ಆರ್.ಆಸ್ಪತ್ರೆ ಶವಾಗಾರದ ಬಳಿ ಶುಕ್ರವಾರ ಬೆಳಗ್ಗೆ ಡಾ. ನಾಗೇಂದ್ರ ಮೃತದೇಹದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ .50 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದ್ದು, ಅವರ ಶ್ರೀಮತಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಲಾಗಿದೆ. ಒಂದು ವಾರದೊಳಗೆ ಪ್ರಕರಣ ಸಂಬಂಧ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.
ಒಂದು ವೇಳೆ ಮೈಸೂರು ಪ್ರಾದೇಶಿಕ ಆಯುಕ್ತರಿಂದ ತನಿಖೆ ಬೇಡ ಎಂದರೆ, ರಾಜ್ಯದ ಯಾವುದೇ ಅಧಿಕಾರಿಯಿಂದ ತನಿಖೆ ಮಾಡಿಸಲು ನಾವು ಸಿದ್ದರಿದ್ದೇವೆ. ಯಾರು ಬೇಡ ಮೈಸೂರು ಪೊಲೀಸ್ ಆಯುಕ್ತರೇ ಮಾಡಿದರೆ ಸಾಕು ಎಂದರೂ ಅದಕ್ಕೂ ನಮ್ಮ ಒಪ್ಪಿಗೆ ಇದೆ ಎಂದು ಹೇಳಿದರು.
ಆತ್ಮಹತ್ಯೆಗೆ ಶರಣಾದ ಡಾ.ನಾಗೇಂದ್ರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ...
ಕಳೆದ ವಾರ ಮೈಸೂರಿನಲ್ಲಿ ಕೋವಿಡ್ ಸಂಬಂಧ 3 ಗಂಟೆ ಸತತವಾಗಿ ಸಭೆ ಮಾಡಿದ್ದೆ. ಆ ಸಭೆಯಲ್ಲಿ ಪ್ರತಿಯೊಂದು ವಿಚಾರವನ್ನು ಹೇಳಿದ್ದೆ. ಈ ಸಂದರ್ಭ ಅಧಿಕಾರಿಗಳಿಂದ ಯಾವುದೇ ದೂರು ಬಂದಿರಲಿಲ್ಲ. ಅಲ್ಲದೇ, ಕೆಲಸದ ಒತ್ತಡದ ಬಗ್ಗೆಯು ಅವರು ಹೇಳಿಕೊಳ್ಳಲಿಲ್ಲ. ತಮಗೆ ಸಮಸ್ಯೆ ಇದ್ದರೆ ಆ ಸಭೆಯಲ್ಲಿ ಹೇಳಬಹುದಿತ್ತು ಅಥವಾ ನಮ್ಮ ಬಳಿ ಆಗದಿದ್ದರೆ ಸ್ಥಳೀಯ ಜನಪ್ರತಿನಿಧಿಗಳ ಬಳಿಯಾದರೂ ಹೇಳಬಹುದಿತ್ತು. ಹಾಗೆನಾದರು ಹೇಳಿದ್ದರೆ ಕೂಡಲೇ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೆ ಎಂದರು.
ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ: 50 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ...
ಎಲ್ಲದಕ್ಕೂ ಸಾವು ಒಂದೇ ಮಾರ್ಗವಲ್ಲ. ಜಿಲ್ಲಾಧಿಕಾರಿ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಒತ್ತಡ ಇರುತ್ತದೆ. ನಾನು ಸಹ ಸಾಕಷ್ಟುಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ಇಡೀ ರಾಜ್ಯವೇ ಕೋವಿಡ್ ವಿಚಾರದಲ್ಲಿ ಸಾಕಷ್ಟುಒತ್ತಡದಿಂದ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಟೆಸ್ಟ್ ನಡೆಸಿ ಸಾವಿನ ಪ್ರಮಾಣ ತಗ್ಗಿಸುವ ಸಲುವಾಗಿ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿ ಒತ್ತಡ ಹೇರುವಿಕೆ ಎಂಬುದಿಲ್ಲ ಎಂದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಮೊದಲಾದವರು ಇದ್ದರು.