6 ರು. ಕೂಲಿ ಕಾರ್ಮಿಕನಿಂದ ಸಚಿವ ಸ್ಥಾನದವರೆಗೆ : ಎಸ್.ಟಿ ಸೋಮಶೇಖರ್

ಕರ್ನಾಟಕ ಸರ್ಕಾರದಲ್ಲಿ ಸಹಕಾರಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ತಮ್ಮ ಹಿಂದಿನ ಜೀವನವನ್ನು ನೆನೆದರು. 6 ಕೂಲಿ ಪಡೆಯುವ ಮೂಲಕ ಜೀವನ ಆರಂಭಿಸಿ ಈಗ ಸಚಿವ ಸ್ಥಾನಕ್ಕೆ ಏರಿರುವುದಾಗಿ ಹೇಳಿದರು. 

Minister ST Somashekar Remember His Past Life

 ಚನ್ನಪಟ್ಟಣ [ಮಾ.01]:  ಗೃಹ ನಿರ್ಮಾಣ ಸಂಘದ ಕಾರ್ಯದರ್ಶಿಯಾಗಿದ್ದವನು ಇಂದ ಸಹಕಾರ ಸಚಿವನಾಗಿದ್ದೇನೆ. ಈ ಹಾದಿಯಲ್ಲಿ ನಾನು ಸಾಕಷ್ಟುಏಳು ಬೀಳು, ಸೋಲು ಗೆಲುವು ಕಂಡಿದ್ದೇನಾದರೂ ಎಂದಿಗೂ ಪ್ರಾಮಾಣಿಕತೆಯನ್ನು ಬಿಟ್ಟಕೊಡಲಿಲ್ಲ, ಸ್ವಾಭಿಮಾನವನ್ನು ಕಳೆದುಕೊಳ್ಳಲಿಲ್ಲ. ನನ್ನ ಬೆಳವಣಿಗೆಗೆ ಅದೇ ಕಾರಣ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಸಹಕಾರಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹುಟ್ಟೂರು ಶೆಟ್ಟಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲೊಂಡು ಮಾತನಾಡಿ, ನನ್ನ ಇಷ್ಟುವರ್ಷದ ಜೀವನದಲ್ಲಿ ಯಾರೂ ಬೊಟ್ಟು ಮಾಡದಂತೆ ಬದುಕಿದ್ದೇನೆ. ನನಗೆ ಹುಟ್ಟೂರಿನ ಜನ ಕರೆದು ಸನ್ಮಾನ ಮಾಡುತ್ತಿರುವುದು, ನಿಜಕ್ಕೂ ವಿವರಿಸಲಾಗದಷ್ಟುಸಂತಸ ಮೂಡಿಸಿದೆ ಎಂದರು.

ಕೂಲಿಗೆ ದುಡಿಯುತ್ತಿದ್ದೆ:

ಪ್ರಾರಂಭದಲ್ಲಿ ನಾನು ಬೆಂಗಳೂರು ಕಾರ್ಪೋರೇಷನ್‌ನಲ್ಲಿ ಕೆಲಸ ಆರಂಭಿಸಿದಾಗ ನನಗೆ ಸಿಗುತಿದ್ದು ದಿನಕ್ಕೆ 6 ರು. ಕೂಲಿ. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿದೆ. ಅಲ್ಲಿ ಮೇಲಾಧಿಕಾರಿಯಿಂದ ಸಾಕಷ್ಟುಕಿರುಕುಳ ಅನುಭವಿಸಿದೆ. ಅವರು ಕಿರುಕುಳ ನೀಡಿದ್ದಕ್ಕೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ನಾನು ಲೆಕ್ಕ ಬರೆದುಕೊಂಡೇ ಕೂರಬೇಕಿತ್ತು ತಮ್ಮ ಗತ ಜೀವನವನ್ನು ಮೆಲುಕು ಹಾಕಿದರು.

ನನ್ನವರೇ ನನ್ನ ವಿರುದ್ಧ ನಿಂತಿದ್ದರು:

ನಾನು ಮೂರು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಹಾಗೆಂದ ಮಾತ್ರಕ್ಕೆ ಎದೆಗುಂದಲಿಲ್ಲ. ಛಲದಿಂದ ಹೋರಾಡಿ ಗೆಲುವನ್ನು ಪಡೆದು ಕೊಂಡಿದ್ದೇನೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ರಾಜೀನಾಮೆ ನೀಡಿ ಹೊರ ಬಂದೆ. ಇದೀಗ ಮಂತ್ರಿ ಸ್ಥಾನ ಪಡೆದುಕೊಂಡಿದ್ದೇನೆ. ಉಪಚುನಾವಣೆಯಲ್ಲಿ ನನ್ನ ಸ್ವಜಾತಿಯ ಘಟಾನುಘಟಿ ನಾಯಕರೇ ನನ್ನನ್ನು ಸೋಲಿಸಲು ನಿಂತಿದ್ದರು. ಆದರೆ, ನನ್ನ ಕ್ಷೇತ್ರದ ಜನತೆ ನನ್ನ ಸೇವೆ ಮತ್ತು ನನ್ನ ಮೇಲಿನ ಪ್ರೀತಿಯಿಂದ ಗೆಲ್ಲಿಸಿದರು. ಇವರ ಯಾವುದೇ ಪ್ರಯತ್ನ ನಡೆಯಲಿಲ್ಲ ಎಂದು ಉಪಚುನಾವಣಾ ರಾಜಕಾರಣವನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡರು.

ರಾಜಕೀಯ ಕ್ರಾಂತಿ: BL ಸಂತೋಷ್ ಭೇಟಿಯಾದ ಜೆಡಿಎಸ್ ಶಾಸಕ...

ಹಸಿದು ಇದ್ದೇನೆ, ಮೃಷ್ಟಾನ್ನವನ್ನೂ ತಿಂದಿದ್ದೇನೆ:

ನಾನು ಜೀವನದಲ್ಲಿ ಎಲ್ಲಾ ರೀತಿಯ ಕಷ್ಟ, ಸುಖವನ್ನು ಅನುಭವಿಸಿದ್ದೇನೆ. ಊಟವಿಲ್ಲದೆ ಉಪವಾಸವಿದ್ದ ದಿನಗಳು ಇವೆ, ಮೃಷ್ಟಾನ್ನ ತಿಂದ ದಿನಗಳೂ ಇವೆ. ಆದರೆ ಯಾವುದಕ್ಕೂ ಎದೆ ಗುಂದಬಾರದು. ಧೈರ್ಯದಿಂದ ಎಲ್ಲವನ್ನೂ ಎದುರಿಸಿದಾಗ ಮಾತ್ರ ನಾವು ಸಾಧಕರಾಗಿ ನಿಲ್ಲಲು ಸಾಧ್ಯ ಎಂದು ಯುವಜನತೆಗೆ ಸ್ಥೈರ್ಯ ತುಂಬಿದರು.

ಹುಟ್ಟೂರಿನ ಅಭಿವೃದ್ಧಿಗೆ ಬದ್ಧ:

ಸ್ವಗ್ರಾಮ ಶೆಟ್ಟಿಹಳ್ಳಿಯ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧವಾಗಿದ್ದು, ಗ್ರಾಮದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿಮಾಡಿ ನೀಡಿ. ಎಲ್ಲವನ್ನೂ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ ಸಚಿವರು, ನನಗೆ ಸಿಕ್ಕಿರುವ ಅಧಿಕಾರಿವನ್ನು ಜನಸೇವೆ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜು, ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ಸಚಿವರ ತಾಯಿ ಸೀತಮ್ಮ, ಸಹೋದರ ಕಿಟ್ಟಣ್ಣ ಮುಂತಾದವರು ಉಪಸ್ಥಿತರಿದ್ದರು.

ಬಾಲ್ಯ ನೆನೆದು ಕಣ್ಣೀರಿಟ್ಟಸಚಿವ

ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಸಚಿವ ಎಸ್‌.ಟಿ. ಸೋಮಶೇಖರ್‌, ತಮ್ಮ ಬಾಲ್ಯ ಹಾಗೂ ತಾಯಿಯನ್ನು ನೆನೆದು ಕಣ್ಣೀರಿಟ್ಟರು. ಕೆಲ ನಿಮಿಷ ಗದ್ಗದಿತರಾದರು. ನನ್ನ ತಾಯಿ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ. ಅವರು ಏನೂ ತಿಳಿಯದ ಮುಗ್ದೆ ಎಂದು ಸ್ಮರಿಸಿಕೊಂಡ ಸಚಿವರು ಕಣ್ಣೀರಿಡುತ್ತಿದ್ದಂತೆ ವೇದಿಕೆ ಮೇಲಿದ್ದ ಅವರ ತಾಯಿ, ವೇದಿಕೆಯ ಮುಂಭಾಗ ಇದ್ದ ಸಚಿವರ ಪತ್ನಿ, ಸಹೋದರ, ಸಹೋದರಿಯರು ಕಣ್ಣೀರಿಟ್ಟರು. ಇದರಿಂದಾಗಿ ಸಭೆ ಕೆಲಕಾಲ ಭಾವುಕಗೊಂಡಿತು.

ಸ್ವಗ್ರಾಮದಲ್ಲಿ ​ಪೂರ್ಣಕುಂಭ ಸ್ವಾಗತ

ಸ್ವಾಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಸಚಿವ ಎಸ್‌.ಸಿ. ಸೋಮಶೇಖರ್‌ ಅವರನ್ನು ಗ್ರಾಮಸ್ಥರು ತೆರೆದ ವಾಹನದಲ್ಲಿ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಕರೆದೊಯ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮೆರವಣಿಗೆಯಲ್ಲಿ ತಮಟೆ ಹಾಗೂ ಜಾನಪದ ಕಲಾಮೇಳಗಳು ಪಾಲ್ಗೊಂಡಿದ್ದವು.

ಗ್ರಾಮದ ಎಲ್ಲಾ ದೇವಾಲಯಗಳಿಗೆ ಸಚಿವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಸಂಸ್ಥೆಗಳು, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಸಹಪಾಠಿಗಳು ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

 ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ನಾನು ಸಂತಸದಿಂದ ನಿಭಾಯಿಸುತ್ತೇನೆ. ನಾನು ಹುಟ್ಟಿದ ಊರು ಇರುವ ಜಿಲ್ಲೆಯ ಅಭಿವೃದ್ಧಿ ಮಾಡಲು ಅವಕಾಶ ಸಿಕ್ಕರೆ, ಅದರಷ್ಟುಸಂತಸ ಬೇರೇನಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಸ್ವಗ್ರಾಮದಲ್ಲಿ ಅಭಿನಂದನೆ ಸ್ವೀಕಾರ ಸಮಾರಂಭಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಡಿಸಿಎಂ ಅಶ್ವತ್‌್ಥ ನಾರಾಯಣ್‌ ಅವರಿಗೆ ಈ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೆರಡು ಜಿಲ್ಲೆ ಹೊಣೆ ಇರುವ ಸಚಿವರನ್ನು ಒಂದೇ ಜಿಲ್ಲೆಗೆ ನೇಮಕ ಮಾಡಲಿದ್ದು ಅವರು ಯಾವ ಜಿಲ್ಲೆ ಬಿಟ್ಟುಕೊಡುತ್ತಾರೆ ನೋಡೋಣ ಎಂದು ತಿಳಿಸಿದರು.

ನಾನು ಈ ಜಿಲ್ಲೆಯ ಉಸ್ತುವಾರಿ ನೀಡುವಂತೆ ಒತ್ತಾಯ ಮಾಡುವುದಿಲ್ಲ. ಅವರು ನೀಡಿದರೆ, ಸಂತೋಷದಿಂದ ಕೆಲಸ ಮಾಡುತ್ತೇನೆ. ಈ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನನ್ನದೇ ಆದ ಚಿಂತನೆಗಳಿವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios