ಬೆಂಗಳೂರು [ಆ.30]:  ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹರಿಸುವ ಸಂಬಂಧ ವಿಶೇಷ ಯೋಜನೆ ಸಿದ್ಧಪಡಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದು, ಮೊದಲ ಹಂತವಾಗಿ ಸಿಬಿಡಿ ಪ್ರದೇಶದಲ್ಲಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಕಚೇರಿಯಲ್ಲಿ ಜಿಲ್ಲಾ ಎಸ್ಪಿಗಳ ಜತೆ ವಿಡಿಯೋ ಕಾನ್ಫೆರನ್ಸ್‌ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಉದ್ಭವಿಸಿರುವ ಸಂಚಾರ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದರು.

ಬೇರೆ ನಗರಗಳಿಗಿಂತ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಹೆಚ್ಚಿದೆ. ಈಗಾಗಲೇ ಹೊಸೂರು ರಸ್ತೆ, ಆನಂದ್‌ ರಾವ್‌ ವೃತ್ತ, ಬಳ್ಳಾರಿ ರಸ್ತೆ, ಪೀಣ್ಯ ಹಾಗೂ ಸಿಬಿಡಿ (ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟ್ರಿಕ್ಟ್) ಸೇರಿದಂತೆ ಹತ್ತು ಸ್ಥಳಗಳನ್ನು ಅಧಿಕ ಟ್ರಾಫಿಕ್‌ ಪ್ರದೇಶಗಳೆಂದು ಅಧಿಕಾರಿಗಳು ಗುರುತಿಸಿದ್ದಾರೆ. ಅಲ್ಲಿನ ಸಂಚಾರ ಸಮಸ್ಯೆ ನಿವಾರಣೆಗೆ ವಿಶೇಷ ಆದತ್ಯೆ ನೀಡಲಾಗುತ್ತದೆ ಎಂದರು ಸಚಿವರು ತಿಳಿಸಿದರು.

ನಗರದಲ್ಲಿ ಸುಲಿತ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ವಿಶೇಷ ಯೋಜನೆ ಸಿದ್ಧಪಡಿಸುವಂತೆ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಿದ್ದೇನೆ. ವಾಹನಗಳ ಓಡಾಟ ಹೆಚ್ಚಿರುವ ಕಡೆ ಸಿಗ್ನಲ್‌ ದೀಪಗಳು, ಸಿಸಿಟಿವಿ ಕ್ಯಾಮೆರಾ ಹಾಗೂ ಟೈಮರ್‌ ಅವಳವಡಿಕೆ, ಮುಖ್ಯ ಹೆದ್ದಾರಿ ಪಕ್ಕದ ಸರ್ವಿಸ್‌ ರಸ್ತೆಗಳಲ್ಲಿ ಸಹ ಹಂಫ್ಸ್‌, ಸಂಚಾರ ನಿರ್ವಹಣೆಗೆ ವಿಶೇಷ ಪೊಲೀಸ್‌ ದಳ ಹಾಗೂ ವಾಹನ ನಿಲುಗಡೆ ಪ್ರದೇಶ ನಿಗದಪಡಿಸುವುದು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಈ ವಿಶೇಷ ಯೋಜನೆಯು ಮೊದಲ ಹಂತವಾಗಿ ಕಬ್ಬನ್‌ ಪಾರ್ಕ್, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಆನಂದ್‌ ರಾವ್‌ ವೃತ್ತ, ಕಮರ್ಷಿಯಲ್‌ ಸ್ಟ್ರೀಟ್‌ ಹಾಗೂ ವಿಧಾನಸೌಧ ಒಳಗೊಂಡಂತೆ ಸಿಬಿಡಿ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಅನಂತರ ನಗರ ವ್ಯಾಪ್ತಿಗೆ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

ಪೊಲೀಸರ ಮೇಲೆ ಜನರಲ್ಲಿ ವಿಶ್ವಾಸ ಮೂಡವಂತೆ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿದಿನ ಜನರಿಗೆ ತೀರಾ ಹತ್ತಿರದಿಂದ ಕೆಲಸ ಮಾಡುವುದು ಸಂಚಾರ ವಿಭಾಗದ ಪೊಲೀಸರು. ಹಾಗಾಗಿ ಸಂಚಾರ ಪೊಲೀಸರು ಜನ ಸ್ನೇಹಿ ಆಡಳಿತಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಗೃಹ ಸಚಿವರು ಸಲಹೆ ನೀಡಿದರು.