ಹಾವೇರಿ(ಆ.27): ಕಾರ್ಮಿಕರು ಮತ್ತು ಉದ್ಯಮಿಗಳ ಮಧ್ಯ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವ ಮಹತ್ವದ ಜವಾಬ್ದಾರಿ ಇರುವ ಕಾರ್ಮಿಕ ಇಲಾಖೆಗೆ ಹೊಸ ರೂಪ ನೀಡಲು ಉದ್ದೇಶಿಸಲಾಗಿದೆ. ಇಲಾಖೆಯ ಯೋಜನೆಗಳ ಕಾರ್ಯಸ್ವರೂಪದಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಮಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಇಲಾಖೆಗೆ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಕಾರ್ಮಿಕ ಇಲಾಖೆ ಯಾರಿಗೂ ಬೇಡದ ಇಲಾಖೆಯಾಗಿತ್ತು. ಈ ಇಲಾಖೆಯ ಬಲವರ್ಧನೆಗಾಗಿ ಮೊದಲ ಬಾರಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ನೇರವಾಗಿ ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಯೋಜನೆಗಳು ಹಾಗೂ ಸೌಲಭ್ಯಗಳ ವಿತರಣೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ನಕಲಿ ಕಾರ್ಡ್‌ ಪತ್ತೆ ಕಾರ್ಮಿಕರ ಜವಾಬ್ದಾರಿ:

ನೈಜ ಕಟ್ಟಡ ಕಾರ್ಮಿಕರ ಬದಲಿಗೆ ಕೇವಲ ಸವಲತ್ತಿಗಾಗಿ ಕಾರ್ಡ್‌ ಮಾಡಿಕೊಂಡಿರುವುದಾಗಿ ದೂರುಗಳು ಬರುತ್ತಿವೆ. ಇಂತಹವರ ಕಾರ್ಮಿಕ ಗುರುತಿನ ಚೀಟಿಗಳನ್ನು ರದ್ದುಪಡಿಸುವ ಜವಾಬ್ದಾರಿ ನೈಜ ಕಾರ್ಮಿಕರದ್ದಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗೆ ಹಾಗೂ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ಕಾರ್ಡ್‌ ರದ್ದುಪಡಿಸಿಬೇಕು. ಜಿಲ್ಲಾಧಿಕಾರಿಗಳ ಸಹಿ ಮತ್ತು ಮುದ್ರೆ ಇರುವ ಕಾರ್ಡ್‌ಗಳಿಗೆ ಮಾತ್ರ ಮಾನ್ಯತೆ ಇರುತ್ತದೆ. ಏಜೆಂಟರ ಮೂಲಕ ಕಾರ್ಮಿಕ ಕಾರ್ಡ್‌ ಮಾಡಿಸಲು ಮುಂದಾಗದೆ ಫಲಾನುಭವಿಗಳೆ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸಿ ಕಾರ್ಡ್‌ ಪಡೆಯಬೇಕು ಎಂದು ಕಾರ್ಮಿಕರಿಗೆ ಸಲಹೆ ನೀಡಿದರು.

ಉಚಿತ ಸೇವೆ ನೀಡುವುದಾಗಿ ಹೇಳಿ ಉಲ್ಟಾ ಹೊಡೆದ ವೈದ್ಯರು: ಖಾಸಗಿ ಡಾಕ್ಟರ್ಸ್‌ಗೆ ನೋಟಿಸ್‌

ರಾಜ್ಯದಲ್ಲಿರುವ ಇಎಸ್‌ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನಿಗಿಸಲು 150 ಹೊಸ ವೈದ್ಯರನ್ನು ನೇಮಕ ಮಾಡಲಾಗಿದೆ. ಕಾರ್ಮಿಕ ವಿಮಾ ಆಸ್ಪತ್ರೆಗಳಲ್ಲಿ ಯಾವುದೇ ಔಷಧಿಗಳ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಇಎಸ್‌ಐ ಆಸ್ಪತ್ರೆಗಳೊಂದಿಗೆ ಇತರ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ನಂತಹ ಸಂಕಷ್ಟ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ದಿಟ್ಟ ನಿಲುವಿನಿಂದ ಲಾಕ್‌ಡೌನ್‌ ವೇಳೆಯಲ್ಲಿ ಕಾರ್ಮಿಕರ ಹಿತಕ್ಕಾಗಿ ಇಡಿ ದೇಶದಲ್ಲಿ ಕರ್ನಾಟಕ ರಾಜ್ಯ ಹೆಚ್ಚು ಅನುದಾನ ವ್ಯಯಿಸಿದೆ. ಯಾವೊಬ್ಬ ಕಾರ್ಮಿಕರು ಹಸಿವಿನಿಂದ ಬಳಲದಂತೆ ಕ್ರಮಕೈಗೊಂಡಿದೆ. ಕಾರ್ಮಿಕರಿಗಾಗಿ 1235 ಕೋಟಿ ವ್ಯಯಿಸಿದೆ. 1.59 ಕೋಟಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ರಾಜ್ಯದಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಶೇ. 85 ರಷ್ಟು ಕಾರ್ಖಾನೆಗಳು ಆರಂಭವಾಗಿವೆ. ಶೇ.75 ರಷ್ಟು ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೆಲಸ ಇಲ್ಲ ಎಂದು ಹೇಳುವ ಪರಿಸ್ಥಿತಿ ಈಗ ಇಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 60,326 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ತಲಾ ಐದು ಸಾವಿರ ರು. ದಂತೆ ಒಂದು ಬಾರಿಗೆ ಪರಿಹಾರ ಹಣ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 30,675 ಫಲಾನುಭವಿಗಳಿಗೆ ಪರಿಹಾರ ಹಣ ಜಮೆಯಾಗಿದೆ. ಪರಿಹಾರ ಹಣ ಪಡೆಯಲು ಅವಧಿ ವಿಸ್ತರಣೆ ಹಾಗೂ ಹೊಸ ಅರ್ಜಿಗೆ ಅವಕಾಶ ಇರುವುದಿಲ್ಲ ಎಂದು ಸಚಿವರು ಹೇಳಿದರು.

ಅಗಸರು, ಕ್ಷೌರಿಕ ವೃತ್ತಿಯಲ್ಲಿ ತೊಡಗಿದವರಿಗೆ ಒಂದು ಬಾರಿಗೆ 5 ಸಾವಿರ ಪರಿಹಾರ ಘೋಷಣೆಯಾಗಿದ್ದು, ಜಿಲ್ಲೆಯಿಂದ ಸೇವಾ ಸಿಂಧು ಆ್ಯಪ್‌ನಲ್ಲಿ 4090 ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 3237 ಕಾರ್ಮಿಕರಿಗೆ ಡಿಬಿಟಿ ಮೂಲಕ ಹಣ ಜಮಾ ಮಾಡಲಾಗಿದೆ. ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರ ಕಾರ್ಮಿಕರೆಂದು ನೋಂದಣಿಯಾಗಿರುವವರ ಪೈಕಿ 9738 ಫಲಾನುಭವಿಗಳಿಗೆ ಮದುವೆ, ಶೈಕ್ಷಣಿಕ ಹಾಗೂ ವೈದ್ಯಕೀಯ ಧನಸಹಾಯವಾಗಿ 8.95 ಕೋಟಿ ಧನಸಹಾಯವನ್ನು ಫಲಾನುಭವಿಗಳ ನೇರ ಖಾತೆಗೆ ಜಮಾ ಮಾಡಲಾಗಿದೆ. ಅಂಬೇಡ್ಕರ್‌ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ 534 ಜನರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗಿದೆ. ನಿರ್ಮಿತಿ ಕೇಂದ್ರ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯಿಂದ 540 ಕಾರ್ಮಿಕರಿಗೆ ತರಬೇತಿ ಹಾಗೂ 333 ಕಾರ್ಮಿಕರಿಗೆ ಟೂಲ್‌ ಕಿಟ್‌ ವಿತರಿಸಲಾಗಿದೆ. ಖಾಸಗಿ ವಾಣಿಜ್ಯ ಚಾಲಕರ ಯೋಜನೆಯಡಿ 634 ಚಾಲಕರಿಗೆ ರೆಡ್‌ ಕ್ರಾಸ್‌ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ಕಿಟ್‌ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮನೆ ನಿರ್ಮಾಣಕ್ಕೆ ಹೊಸ ನಿಯಮ:

ಕಾರ್ಮಿಕರಿಗಾಗಿ ರಾಜೀವಗಾಂಧಿ ಹೌಸಿಂಗ್‌ ನಿಗಮ, ಪ್ರಧಾನಮಂತ್ರಿ ವಸತಿ ಯೋಜನೆ ಸಹಯೋಗದಲ್ಲಿ ಮನೆ ನಿರ್ಮಾಣಕ್ಕೆ ಹೊಸ ನಿಯಮಗಳನ್ನು ರೂಪಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಪಡೆಯಲು ಚಿಂತಿಸಲಾಗಿದೆ. ನಗರ ಪ್ರದೇಶದಲ್ಲಿ ಎಲ್ಲರಿಗೂ ನಿವೇಶನ ಒದಗಿಸುವುದು ಕಷ್ಟವಾಗಿರುವುದರಿಂದ ವರ್ಟಿಕಲ್‌ ಆಧಾರದ ಮೇಲೆ ಜಿ ಪ್ಲಸ್‌ 1 ಅಥವಾ ಜಿ ಪ್ಲಸ್‌ 2,3 ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಕಾರ್ಮಿಕ ಇಲಾಖೆ ಕಾರ್ಡ್‌ ಇದ್ದವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಐದರಿಂದ ಆರು ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಫಲಾನುಭವಿಗಳು ಶೇ. 15ರ ವೆಚ್ಚ ಭರಿಸಬೇಕಾಗುತ್ತದೆ. ಗುಣಮಟ್ಟದ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಚೆಕ್‌ ವಿತರಣೆ:

ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ, ಮದುವೆ, ವೈದ್ಯಕೀಯ ಹಾಗೂ ಶೈಕ್ಷಣಿಕ ಸಹಾಯಧನದ ಮಂಜೂರಾತಿ ಪತ್ರ ವಿತರಿಸಲಾಯಿತು ಹಾಗೂ ಪರಿಹಾರ ಚೆಕ್‌ಗಳನ್ನುವಿತರಿಸಲಾಯಿತು. ಕಟ್ಟಡ ಕಾರ್ಮಿಕರ ಗುರುತು ಪತ್ರಗಳನ್ನು ವಿತರಿಸಲಾಯಿತು.

ಸಂವಾದದಲ್ಲಿ ಭಾಗವಹಿಸಿದ ಕಾರ್ಮಿಕರು ಹಲವು ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು. ಕಾರ್ಮಿಕ ಕಾರ್ಡ್‌ ವಿತರಣೆ, ಸೌಲಭ್ಯಗಳ ಮಂಜೂರಾತಿಗಳನ್ನು ಜಿಲ್ಲಾ ಕಾರ್ಮಿಕ ಇಲಾಖೆಗೆ ವಿಕೇಂದ್ರೀಕರಿಸುವುದು, ಮನೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಕುರಿತಂತೆ ಸಚಿವರ ಗಮನ ಸೆಳೆದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ರಮೇಶ ದೇಸಾಯಿ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ, ಉಪವಿಭಾಗಾಧಿಕಾರಿ ಡಾ. ದಿಲೀಷ್‌ ಶಶಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಇತರರು ಇದ್ದರು.