ಉಚಿತ ಸೇವೆ ನೀಡುವುದಾಗಿ ಹೇಳಿ ಉಲ್ಟಾ ಹೊಡೆದ ವೈದ್ಯರು: ಖಾಸಗಿ ಡಾಕ್ಟರ್ಸ್‌ಗೆ ನೋಟಿಸ್‌

ಕೋವಿಡ್‌ ಸೇವೆಗೆ ಬರಲೊಪ್ಪದ ಖಾಸಗಿ ವೈದ್ಯರಿಗೆ ನೋಟಿಸ್‌| ಕೋವಿಡ್‌ ಆಸ್ಪತ್ರೆಯಲ್ಲಿ ಉಚಿತ ಸೇವೆ ನೀಡುವುದಾಗಿ ಹೇಳಿದ್ದ ಖಾಸಗಿ ವೈದ್ಯರು| ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ|
 

DC Notice Issued to Private Doctors in Haveri

ನಾರಾಯಣ ಹೆಗಡೆ

ಹಾವೇರಿ(ಆ.26): ಕೋವಿಡ್‌ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದ ಖಾಸಗಿ ವೈದ್ಯರು ಈಗ ಉಲ್ಟಾ ಹೊಡೆದಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ 13 ಖಾಸಗಿ ವೈದ್ಯರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಿತ್ಯವೂ ನೂರಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣ ದಾಖಲಾಗುತ್ತಿದೆ. ಕೋವಿಡ್‌ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸರ್ಕಾರಿ ವೈದ್ಯರಲ್ಲಿ ಅನೇಕರಿಗೆ ಪಾಸಿಟಿವ್‌ ಬಂದು ಸೇವೆಗೆ ಬರದಂತಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 3500ಕ್ಕೂ ಹೆಚ್ಚು ಕೊರೋನಾ ಕೇಸ್‌ ದಾಖಲಾಗಿದ್ದು, ಈ ಪೈಕಿ ಸುಮಾರು 1300 ಸಕ್ರಿಯ ಕೇಸ್‌ಗಳಿವೆ. ಇವರಿಗೆ ಸಮರ್ಪಕ ಸೇವೆ ಒದಗಿಸಲು ಖಾಸಗಿ ವೈದ್ಯರ ಸೇವೆ ಅಗತ್ಯವಾಗಿದೆ. ಆದರೆ, ತಿಂಗಳ ಹಿಂದೆ ಕೋವಿಡ್‌ ಆಸ್ಪತ್ರೆಗಳಲ್ಲಿ ಉಚಿತ ಸೇವೆ ನೀಡುವುದಾಗಿ ಹೇಳಿ ಮಾದರಿ ಎನಿಸಿದ್ದ ಖಾಸಗಿ ವೈದ್ಯರು ಈಗ ಸೋಂಕಿತರ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೂ ತಲೆನೋವು ತರಿಸಿದೆ.

ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ: ಹಾವೇರಿ ವೈದ್ಯರ ಕಾರ್ಯಕ್ಕೆ ಸಚಿವ ಸುಧಾಕರ್‌ ಶ್ಲಾಘನೆ

13 ವೈದ್ಯರಿಗೆ ನೋಟಿಸ್‌:

ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೇವೆಗೆ ಅರ್ಧದಷ್ಟು ಬೆಡ್‌ ಮೀಸಲಿಡಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೇವೆಗೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದಷ್ಟು ಶುಲ್ಕ ಪಡೆಯಬಹುದಾಗಿದೆ. ಸರ್ಕಾರ ತಿಂಗಳ ಹಿಂದೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅರ್ಧದಷ್ಟು ಬೆಡ್‌ ಮೀಸಲಿಡುವಂತೆ ಆದೇಶ ಮಾಡಿದೆ. ಆದರೆ, ಜಿಲ್ಲೆಯ ತಜ್ಞ ವೈದ್ಯರು ಹಾಗೂ ಆಯುಷ್‌ ಸೇರಿದಂತೆ ಕೆಪಿಎಂಎ ಅಡಿಯಲ್ಲಿ ನೋಂದಾಯಿಸಿಕೊಂಡಿರುವ 570 ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಬದಲು ಕೋವಿಡ್‌ ಆಸ್ಪತ್ರೆಯಲ್ಲೇ ತಾವು ಉಚಿತ ಸೇವೆ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರ ಗುರುತಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿಲ್ಲ. ಆದರೆ, ಈಗ ಇದೇ ಖಾಸಗಿ ವೈದ್ಯರಲ್ಲಿ ಅನೇಕರು ಉಲ್ಟಾ ಹೊಡೆದಿದ್ದಾರೆ. 

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ನಿತ್ಯದ ಪಾಳಿಯ ಪ್ರಕಾರ ಅಗತ್ಯವಿರುವಷ್ಟು ಖಾಸಗಿ ವೈದ್ಯರ ಪಟ್ಟಿ ಮಾಡಿ ಅವರಿಗೆ ಸೇವೆ ನೀಡುವಂತೆ ಸೂಚಿಸಲಾಗುತ್ತಿತ್ತು. ಈ ಪೈಕಿ ಅನೇಕರು ಸೇವೆಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು 13 ಖಾಸಗಿ ವೈದ್ಯರಿಗೆ ನೋಟಿಸ್‌ ನೀಡಿದ್ದಾರೆ. ಒಂದು ವೇಳೆ ಕೋವಿಡ್‌ ಸೇವೆಗೆ ಬರಲು ಒಪ್ಪದಿದ್ದರೆ ನಿಮ್ಮ ಆಸ್ಪತ್ರೆಯನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರೂವರೆ ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಲೇ ಇದೆ. ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾಡಳಿತ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಿದೆ. ಆದರೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಎದುರಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಚಿಕಿತ್ಸೆಗಾಗಿ ಶೇ. 50 ರಷ್ಟು ಬೆಡ್‌ ಮೀಸಲಿಡುವಂತೆ ಸರ್ಕಾರ ತಿಂಗಳ ಹಿಂದೆಯೇ ಆದೇಶ ಹೊರಡಿಸಿದೆ. ಆದರೆ, ಜಿಲ್ಲೆಯಲ್ಲಿ ಅಂಥ ದೊಡ್ಡ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಿದ್ದು, ಸಣ್ಣಪುಟ್ಟ ಆಸ್ಪತ್ರೆಗಳಲ್ಲಿ ಅರ್ಧದಷ್ಟುಬೆಡ್‌ಗಳನ್ನು ಕೋವಿಡ್‌ಗೆ ಮೀಸಲಿಟ್ಟರೆ ಇನ್ನುಳಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ತಮಗೆ ಕೋವಿಡ್‌ ಆಸ್ಪತ್ರೆ ಮತ್ತು ಕೇರ್‌ ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರಿಕೊಂಡಿದ್ದರು. ಸರ್ಕಾರಿ ವೈದ್ಯರ ಕೊರತೆ ಇರುವುದರಿಂದ ಜಿಲ್ಲಾಡಳಿತ ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಸೋಂಕು ಹೆಚ್ಚುತ್ತಿರುವ ದಿನಗಳಲ್ಲಿ ಖಾಸಗಿ ವೈದ್ಯರು ಕೋವಿಡ್‌ ಸೇವೆಗೆ ಹಿಂದೇಟು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ಕೋವಿಡ್‌ ಕರ್ತವ್ಯಕ್ಕೆ ಹಾಜರಾಗದ ಎಲ್ಲ ಖಾಸಗಿ ವೈದ್ಯರಿಗೆ ನೋಟಿಸ್‌ ನೀಡಲಾಗಿದೆ. ಅಲ್ಲದೇ ಈ ಕುರಿತು ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಖಾಸಗಿ ವೈದ್ಯರೇ ಸೇರಿ ಕೋವಿಡ್‌ ಆಸ್ಪತ್ರೆ ಮಾಡಿಕೊಂಡು ಅಲ್ಲಿ ಸೇವೆ ನೀಡಬಹುದು. ಇಲ್ಲದಿದ್ದರೆ ಸರ್ಕಾರಿ ಕೋವಿಡ್‌ ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ಅವರಿಂದ ಸಮರ್ಪಕ ಉತ್ತರ ಬಂದಿಲ್ಲ. ಅದಕ್ಕಾಗಿ ಕೋವಿಡ್‌ ಕರ್ತವ್ಯಕ್ಕೆ ಹಾಜರಾಗದಿದ್ದರೆ ನಿಮ್ಮ ಆಸ್ಪತ್ರೆ ಪರವಾನಗಿ ರದ್ದುಗೊಳಿಸುವ ಅಥವಾ ವಶಕ್ಕೆ ಪಡೆಯುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ನೋಡಿ | ಬಿಬಿಎಂಪಿಯಿಂದ ಸಾರ್ವಜನಿಕರಿಗೆ ಗುಡ್‌ನ್ಯೂಸ್‌; ಇವರೆಲ್ಲಾ ಮಾಸ್ಕ್ ಧರಿಸಬೇಕೆಂದಿಲ್ಲ!

"

Latest Videos
Follow Us:
Download App:
  • android
  • ios