ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಮುಂಗಾರು ಬೆಳೆಗಳನ್ನು ಉಳಿಸಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಆಂಧ್ರಪ್ರದೇಶದ ಪಾಲಿನ 4 ಟಿಎಂಸಿ ನೀರನ್ನು ಬಳಸಿಕೊಳ್ಳಲು ಆಂಧ್ರ ಸಿಎಂ ಜೊತೆ ಚರ್ಚಿಸುವಂತೆ ಸಚಿವ ಶಿವರಾಜ ತಂಗಡಗಿ ಅವರು ಡಿ.ಕೆ. ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ.

ಬೆಂಗಳೂರು (ನ.5): ತುಂಗಭದ್ರಾ ಜಲಾಶಯ(Tungabhadra Reservoir)ದಲ್ಲಿ ನೀರಿನ ಲಭ್ಯತೆ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ಮುಂಗಾರು ಬೆಳೆಗಳನ್ನು ಉಳಿಸಿಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಆಂಧ್ರಪ್ರದೇಶದ ಪಾಲಿನ ನದಿ ಸಹಾಯ ಕೋಟಾದಡಿ ಉಳಿಕೆಯಾಗಿರುವ 4 ಟಿಎಂಸಿ ನೀರನ್ನು ಬಳಸಿಕೊಳ್ಳಲು ಆಂಧ್ರಪ್ರದೇಶ ಮುಖ್ಯಮಂತ್ರಿ ಜತೆ ಚರ್ಚಿಸುವಂತೆ ಸಚಿವ ಶಿವರಾಜ ತಂಗಡಗಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಚಿವ ಶಾಸಕರ ನಿಯೋಗ ಸಿಎಂ ಭೇಟಿ

ಈ ಸಂಬಂಧ ಬುಧವಾರ ಸಚಿವರು ಹಾಗೂ ಶಾಸಕರನ್ನು ಒಳಗೊಂಡ ನಿಯೋಗದ ಜತೆ ಸಿಎಂರನ್ನು ಭೇಟಿ ಮಾಡಿದ ಅವರು, ತುಂಗಭದ್ರಾ ಜಲಾಶಯದ ನೀರಿನ ಲಭ್ಯತೆ, ಕಾಲುವೆಗಳಿಗೆ ಈಗಾಗಲೇ ಹರಿಸಿರುವ ನೀರಿನ ಪ್ರಮಾಣ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಕೊರತೆ ಕುರಿತು ವಿವರಣೆ ನೀಡಿದ್ದಾರೆ.

ತುಂಗಾಭದ್ರಾ ಜಲಾಶಯದಲ್ಲಿ ಉಳಿದಿರುವ ನೀರೆಷ್ಟು?

ತುಂಗಭದ್ರಾದಲ್ಲಿ ರಾಜ್ಯದ ಪಾಲು 70.807 ಟಿಎಂಸಿ ಇದೆ. ಇದರಲ್ಲಿ 10.71 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಕಾಯ್ದಿರಿಸಲಾಗಿದ್ದು, ನೀರಾವರಿಗಾಗಿ 60.097 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ.

ಜೂ.1ರಿಂದ ಅ.31ರವರೆಗೆ 51.243 ಟಿಎಂಸಿ ನೀರನ್ನು ನೀರಾವರಿಗೆ ಬಳಸಲಾಗಿದೆ. ನ.1ರಿಂದ 11ರವರೆಗೆ ಮತ್ತೆ 8.170 ಟಿಎಂಸಿ ನೀರು ಬಳಕೆಯಾಗುವ ಸಾಧ್ಯತೆಯಿದ್ದು, ಒಟ್ಟಾರೆ ನೀರಾವರಿ ಬಳಕೆ 59.413 ಟಿಎಂಸಿಗೆ ತಲುಪಲಿದೆ. ಹೀಗಾಗಿ ನೀರಾವರಿಗೆ ಉಳಿದಿರುವುದು ಕೇವಲ 0.684 ಟಿಎಂಸಿ ನೀರು ಮಾತ್ರ.

ನ.11ರಿಂದ 15ರವರೆಗೆ ಕಾಲುವೆಗಳಿಗೆ ನೀರು ಹರಿಸಲು 1.796 ಟಿಎಂಸಿ ಕೊರತೆಯಾಗುವ ಅಂದಾಜಿದೆ. ನವೆಂಬರ್ 30ರವರೆಗೆ ನೀರು ಪೂರೈಸಲು ಒಟ್ಟಾರೆ 6.900 ಟಿಎಂಸಿ ಹೆಚ್ಚುವರಿ ನೀರಿನ ಕೊರತೆ ಎದುರಾಗಲಿದೆ.

ಆಂಧ್ರಪ್ರದೇಶದ ರಿವರ್‌ ಅಸಿಸ್ಟೆನ್ಸ್‌ ಕೋಟಾದಡಿ ಒಟ್ಟು 5 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಈಗಾಗಲೇ 1 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ. ಉಳಿದ 4 ಟಿಎಂಸಿ ನೀರನ್ನು ಕರ್ನಾಟಕದ ಕಾಲುವೆಗಳಿಗೆ ತಿರುಗಿಸಿಕೊಳ್ಳಬಹುದು. ಈ ಬಗ್ಗೆ ತಾವು ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮನವೊಲಿಸಿದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಸಿದ್ದಾರೆ.

Scroll to load tweet…