ಕೊರೋನಾ ಅಟ್ಟಹಾಸ: ವಿಜಯಪುರ ಜಿಲ್ಲೆ​ಯಲ್ಲಿ ಭಾಗಶಃ ಲಾಕ್‌ಡೌನ್‌, ಸಚಿವೆ ಜೊಲ್ಲೆ

ಮುಖ್ಯಮಂತ್ರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡದಿರಲು ನಿರ್ಧಾರ| ವಿಜಯಪುರ ಜಿಲ್ಲೆಯಲ್ಲೂ ಸಂಪೂರ್ಣ ಲಾಕ್‌ಡೌನ್‌ ಇರದೆ, ಸದ್ಯ ಜಾರಿಯಲ್ಲಿರುವ ಭಾಗಶಃ ಲಾಕ್‌ಡೌನ್‌ ಮಾತ್ರ ಮುಂದುವರಿಯ​ಲಿದೆ ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ|

Minister Shashikala Jolle Talks Over Lockdown in Vijayapura District

ವಿಜಯಪುರ(ಜು.14): ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಇಲ್ಲ. ಎಂದಿನಂತೆ ಭಾಗಶಃ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಮುಖ್ಯಮಂತ್ರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡದಿರಲು ತಿಳಿಸಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲೂ ಸಂಪೂರ್ಣ ಲಾಕ್‌ಡೌನ್‌ ಇರದೆ, ಸದ್ಯ ಜಾರಿಯಲ್ಲಿರುವ ಭಾಗಶಃ ಲಾಕ್‌ಡೌನ್‌ ಮಾತ್ರ ಮುಂದುವರಿಯ​ಲಿದೆ ಎಂದು ತಿಳಿಸಿದರು.

ಸೋಮವಾರ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮೂಲಕ ಅಭಿಪ್ರಾಯ ಸಂಗ್ರಹಿಸಲು ಕರೆಯಲಾಗಿದ್ದ ಸಭೆಯಲ್ಲಿ 8 ರಿಂದ 10 ದಿನಗಳ ಕಾಲ ಲಾಕ್‌ಡೌನ್‌ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಅದರನ್ವಯ ಸಂಜೆ ಮುಖ್ಯಮಂತ್ರಿಗಳಿಗೆ ವಿಡಿಯೋ ಸಂವಾದದ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್‌ ಸೋಂಕಿತರು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೆ ಮನವಿ ಮಾಡಲಾಗಿ, ಮುಖ್ಯಮಂತ್ರಿಗಳು ಸಂಪೂರ್ಣ ಲಾಕ್‌ಡೌನ್‌ ಬೇಡವೆಂದಿದ್ದು, ಭಾಗಶಃ ಲಾಕ್‌ಡೌನ್‌ಗೆ ಸೂಚನೆ ನೀಡಿದ್ದಾರೆ ಎಂದರು.

ವರ್ಷ​ದಲ್ಲಿ ವಿಜಯಪುರ ವಿಮಾ​ನ ನಿಲ್ದಾಣ ಪೂರ್ಣ: ಡಿಸಿಎಂ ಗೋವಿಂದ ಕಾರ​ಜೋ​ಳ

ಲಾಕ್‌ಡೌನ್‌ ಬಗ್ಗೆ ಸಿಎಂಗೆ ಗಮನಕ್ಕೆ:

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಗಮನಕ್ಕೆ ತಂದು ಲಾಕ್‌ಡೌನ್‌ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಸಾರ್ವಜನಿಕರು ಕೂಡ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಲು ಮತ್ತು ಅವಶ್ಯಕ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಸಮಿತಿ ರಚನೆ:

ಮಹಾರಾಷ್ಟ್ರ ವಲಸೆ ಕಾರ್ಮಿಕರ ಮತ್ತು ಅವರ ಪ್ರಾಥಮಿಕ ಸಂಪರ್ಕದಿಂದ ಜಿಲ್ಲೆಯಲ್ಲಿ ಸೋಂಕು ಹರಡಿದ್ದು, ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸ್ವಚ್ಛತೆ ಕುರಿತು ಜಿಲ್ಲೆಯಲ್ಲಿ ವಾರ್ಡವಾರು ನಾಗರಿಕರಲ್ಲಿ ಅರಿವು ಮೂಡಿಸಲು ಕಾರ್ಯಪಡೆ ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗುವುದು. ಸ್ವಾ್ಯಬ್‌ ಪರೀಕ್ಷೆ ಇನ್ನಷ್ಟುಚುರುಕುಗೊಳಿಸಲು ಶೀಘ್ರದಲ್ಲೇ ಆರ್‌ಟಿಪಿಸಿಆರ್‌ ಲ್ಯಾಬ್‌ ಕಾರ್ಯಾರಂಭಗೊಳ್ಳಲಿದೆ ಎಂದರು.

2 ಕೋಟಿ ಪರಿಹಾರ ಧನ:

ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಯಾವುದೇ ಕೊರತೆ ಇಲ್ಲ. ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ ಮತ್ತು ಇನ್ನಿತರ ಬೆಳೆ ಹಾನಿಗೆ 2 ಕೋಟಿ ಪರಿಹಾರ ಧನ ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲೆ ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸೋಮನಗೌಡ ಪಾಟೀಲ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದ ರೆಡ್ಡಿ, ಎಸ್ಪಿ ಅನುಪಮ್‌ ಅಗರವಾಲ್‌ ಸೇರಿ ಮುಂತಾದವರು ಇದ್ದರು.
 

Latest Videos
Follow Us:
Download App:
  • android
  • ios