ಚಿಕ್ಕೋಡಿ(ಜ.24): ಪ್ರಧಾನಮಂತ್ರಿ ಹಾಗೂ ಗೃಹ ಸಚಿವ ಅಮಿತ್ ಶಾ ಬಹಳಷ್ಟು ಯೋಚನೆ ಮಾಡಿಯೇ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದಾರೆ. ಆದರೆ ಈ ಕಾಯ್ದೆ ಬಗ್ಗೆ ಭಾರತದಲ್ಲಿ ಕಾಂಗ್ರೆಸ್‌ನವರು ಮುಸ್ಲಿಂ ಸಮುದಾಯದವರಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದು, ಅವರನ್ನು ಭಯದಲ್ಲಿಡುವ ಪ್ರಯತ್ನ ದೇಶದಲ್ಲಿ ಪರೋಕ್ಷವಾಗಿ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಇದು ಪೌರತ್ವ ಕೊಡುವ ಕಾಯ್ದೆಯಾಗಿದ್ದು ಪೌರತ್ವ ಕಸಿದುಕೊಳ್ಳುವ ಕಾಯ್ದೆಯಲ್ಲ. ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯಕ್ಕೊಳಗಾದ ಜನರನ್ನು ಈ ಪೌರತ್ವ ಕಾಯ್ದೆಯಡಿಯಲ್ಲಿ ನ್ಯಾಯ ಒದಗಿಸಿಕೊಡಲಾಗಿದೆ. ಇದರಲ್ಲಿ ಯಾವುದೇ ಸಂವಿಧಾನತ್ಮಕ ತಿದ್ದುಪಡಿ ಮಾಡಿರುವುದಿಲ್ಲ. ಆದ್ದರಿಂದ ಭಾರತದ ಮುಸ್ಲಿಂ ಜನಾಂಗದವರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಮತ್ತು ಭಾರತದಲ್ಲಿ ಯಾರೇ ದೇಶದ್ರೋಹ ಕೆಲಸ ಮಾಡಿದರು ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜ.26ರಂದು ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಒಟ್ಟು 3985 ಬೂತ್‌ಗಳಿದ್ದು ಪ್ರತಿ ಬೂತ್‌ ಅಧ್ಯಕ್ಷರ ಮನೆಯ ಮೇಲೆ ರಾಷ್ಟ್ರದ್ವಜ ಹಾರಿಸಲಾಗುವುದು. ಪ್ರತಿ ಬೂತ್‌ ನಲ್ಲಿ ಉಟ್ಟಬಟ್ಟೆಯ ಮೇಲೆ ಬಂದವರು ಎಂಬ ಪುಸ್ತಕವನ್ನು ಓದಿ ಹೇಳಲಾಗುವುದು, ಗ್ರಾಮದ ಜನರ ಮನೆ-ಮನೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ನಂತರ ಮಾತನಾಡಿದ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ, ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದ ಮೇಲೆ ಭಾರತಕ್ಕೆ ಎರಡು ವಿಷಯ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಒಂದು ಇಲ್ಲಿನ ಮುಸ್ಲಿಂ ಸಮುದಾಯದವರು ಪಾಕಿಸ್ತಾನ ಬೆಂಬಲಿಸುವುದಿಲ್ಲ, ಇನ್ನೊಂದು ಇಲ್ಲಿನ ಕಾಂಗ್ರೆಸ್‌ ಪಕ್ಷ ಪಾಕಿಸ್ತಾನ ಪರವಾಗಿ ಇದೆ ಎಂಬುದು ಕಂಡು ಬರುತ್ತೆ ಎಂದರು.

ಕಾಂಗ್ರೆಸ್‌ ಮುಸ್ಲಿಂ ಜನರಿಗೆ ನಿರಂತರ ಭಯವೊಡ್ಡಿ ಅವರನ್ನು ತಮ್ಮ ಮತಬ್ಯಾಂಕ್‌ ಆಗಿ ಪರಿವರ್ತಿಸಿಕೊಂಡಿದೆ. ಇದು ಅವರ ತಂತ್ರಗಾರಿಕೆಯಾಗಿರಬಹುದು. ಆದರೆ 2023 ಮತ್ತು 2024ರಲ್ಲಿ ಮತ್ತೆ ರಾಜ್ಯ ವಿಧಾನಸಭೆ ಮತ್ತು ಕೆಂದ್ರ ಲೋಕಸಭೆ ಚುನಾವಣೆಗಳು ಬರಲಿದ್ದು ಆಗ ಇವತ್ತಿನ ಕಾಂಗ್ರೆಸ್‌ ನಡೆ ಅವರಿಗೆ ತಿರುಗುಬಾಣವಾಗಬಹುದು. ಎನ್‌.ಆರ್‌.ಸಿ. ಸಿ.ಎ.ಎ ಗಳ ನಡುವೆ ಹೋಲಿಕೆ ಮಾಡುವುದು ಸಮ್ಮಂಜಸ ವಿಷಯವಲ್ಲ. ಪೌರತ್ವ ಕಾಯ್ದೆಯು ಇಲ್ಲಿಯವರೆಗೆ 6 ಬಾರಿ ತಿದ್ದುಪಡಿಯಾಗಿದ್ದು ಈಗ 7ನೇ ಬಾರಿ ತಿದ್ದುಪಡಿಯ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲುಗೊಳಿಸಿದೆ. ಆದ್ದರಿಂದ ಜ.26 ರಂದು ಒಟ್ಟು 30000 ಕಾರ್ಯಕರ್ತರು ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ ಎಂದರು. ಈ ವೇಳೆ ಚಿಕ್ಕೋಡಿ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಹಾಜರಿದ್ದರು.