ಹುಬ್ಬಳ್ಳಿ(ನ.19): ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನ್ನ ಹೆಸರು ಕೈಬಿಡಲಾಗುತ್ತದೆ ಎಂಬ ಮಾತುಗಳು ಹರಿದಾಡುತ್ತಿವೆ. ಇದು ಮಾಧ್ಯಮ ಸೃಷ್ಟಿ. ಆದರೂ, ಪಕ್ಷದ ನಿರ್ಧಾರಕ್ಕೆ ನಾನು ಸದಾ ಬದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಬುಧವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೆಸರು ಕೈಬಿಡುವ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಈ ಬಗ್ಗೆ ಪಕ್ಷದ ಹಿರಿಯರು ನನಗೆ ಹೇಳಿಲ್ಲ. ಬರೀ ಮಾಧ್ಯಮಗಳ ಮೂಲಕವೇ ಗೊತ್ತಾಗಿದೆ. ಪಕ್ಷದ ಹಿರಿಯರು ನೀಡಿದ ಸಚಿವ ಸ್ಥಾನದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಇಲಾಖೆಯಲ್ಲಿ ಮತ್ತಷ್ಟುಒಳ್ಳೆಯ ಕೆಲಸಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಏಕೈಕ ಮಹಿಳಾ ಸಚಿವೆಯಾಗಿರುವ ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಕ್ಯಾಬಿನೆಟ್‌ ಸರ್ಕಸ್‌ಗೆ ಟ್ವಿಸ್ಟ್! ಈ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿಭಾಗ್ಯ!

ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ಬಂದ ಮೇಲೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯ ರೀತಿಯಿಂದಲೇ ಮುಂದೆ ಹೋಗುತ್ತದೆ ಎಂದರು.
ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮರಾಠಾ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಈ ನಿಗಮವನ್ನು ರಚಿಸಲು ನಿರ್ಧರಿಸಿದ್ದಾರೆ. ಮರಾಠಾ ಸಮಾಜದಲ್ಲಿ ಸಾಕಷ್ಟುಜನ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರೆಲ್ಲರ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಇದಕ್ಕೆ ಅನರ್ಥ ಕಲ್ಪಿಸುವುದು ತರವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೀರಶೈವ- ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಕುರಿತು ಕೇಳಿದ ಪ್ರಶ್ನೆಗೂ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಮುದಾಯದಲ್ಲೂ ಸಾಕಷ್ಟುಹಿಂದುಳಿದವರಿದ್ದಾರೆ. ಅವರೆಲ್ಲರ ಅಭಿವೃದ್ಧಿ ಹಿನ್ನೆಲೆಯಲ್ಲಿ ಇದನ್ನು ರಚಿಸಲಾಗಿದೆ ಎಂದರಲ್ಲದೇ, ಬಸವೇಶ್ವರ ಅಭಿವೃದ್ಧಿ ನಿಗಮ ಅಥವಾ ಲಿಂಗಾಯತ ಅಭಿವೃದ್ಧಿ ನಿಗಮ ಎಂದಾಗಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಹೌದು ಈ ಬಗ್ಗೆ ಈಗಾಗಲೇ ಚರ್ಚೆಗಳಾಗುತ್ತಿವೆ. ಆದರೆ, ಮೊದಲಿನಿಂದಲೂ ವೀರಶೈವ ಲಿಂಗಾಯತ ಎಂದೇ ಬಂದಿರುವುದರಿಂದ ರಾಜ್ಯ ಸರ್ಕಾರ ಆ ರೀತಿ ಮಾಡಿದೆ ಅಷ್ಟೇ. ಅದರಿಂದ ಅಷ್ಟೇನೂ ಸಮಸ್ಯೆಯಾಗದು ಎಂದು ನುಡಿದರು. ಈ ವೇಳೆ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಇದ್ದರು.