ಬೆಂಗಳೂರು(ಫೆ.26): ನಗರದ ಸುತ್ತಲಿನ ಕನಿಷ್ಠ 20 ಪ್ರದೇಶಗಳಲ್ಲಿ ಹೊಸದಾಗಿ ಎಂಪಿಎಂಸಿ ಮಾರುಕಟ್ಟೆಗಳನ್ನು ನಿರ್ಮಿಸಲು ಜಮೀನು ಗುರುತಿಸುವಂತೆ ಕೃಷಿ, ಕಂದಾಯ ಅಧಿಕಾರಿಗಳು ಮತ್ತು ಬೆಂ.ನಗರ ಜಿಲ್ಲಾಧಿಕಾರಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸೂಚನೆ ನೀಡಿದ್ದಾರೆ. 

ಕೃಷಿ ಮಾರಾಟ ಇಲಾಖೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಹಾಗೂ ಕೋಲಾರ ರಸ್ತೆಯಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಒತ್ತುವರಿ ತೆರವುಗೊಳಿಸಿರುವ ಸರ್ಕಾರಿ ಜಮೀನುಗಳಲ್ಲಿ ಕೃಷಿ ಮಾರುಕಟ್ಟೆ ಸ್ಥಾಪಿಸಲು ಜಾಗ ಗುರುತಿಸಿ. ಕನಿಷ್ಠ 5 ರಿಂದ 10 ಎಕರೆ ಜಮೀನನ್ನು ನಗರದ ವಿವಿಧೆಡೆ ಮಂಜೂರು ಮಾಡಿದ್ದಲ್ಲಿ ಮಾರುಕಟ್ಟೆ ನಿರ್ಮಿಸಿ ರೈಕರು ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2019ರ ಅ.21ರಂದು ಮುಖ್ಯಮಂತ್ರಿಗಳು ನಗರದ ವಿವಿಧೆಡೆ ಇರುವ ಸರ್ಕಾರಿ ಜಮೀನುಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಜಂಟಿಯಾಗಿ ತನಿಖೆ ಕೈಗೊಂಡು ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಈಗಾಗಲೇ ಗುರುತಿಸಿರುವ ಸಿಂಗೇನ ಅಗ್ರಹಾರದ 42 ಎಕರೆ ಭೂಸ್ವಾದೀನ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುವುದಾಗಿ ತಿಳಿಸಿದರು. 

ನ್ಯಾಯಾಲಯಗಳಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಆಗುವಂತೆ ಕ್ರಮ ಜರುಗಿಸುವಂತೆಯೂ ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.