'ಯಡಿಯೂರಪ್ಪ ಮೋಸ ಮಾಡುವ ಜಾಯಮಾನದವರಲ್ಲ'
ಕೃಷ್ಣ ಬೈರೇಗೌಡರಿಗೆ ಹಿಂದೆ, ಮುಂದೆ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ರಾಜಿನಾಮೆ ನೀಡಿದ್ದ 17 ಶಾಸಕರ ಪೈಕಿ, 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ|ಎಚ್. ವಿಶ್ವನಾಥ ಹೊರತುಪಡಿಸಿ, ಎಂಟಿಬಿ ನಾಗರಾಜ ಮತ್ತು ಆರ್. ಶಂಕರ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ| ಪ್ರತಾಪಗೌಡ್ ಪಾಟೀಲ್ ಮತ್ತು ಮುನಿರತ್ನ ಚುನಾವಣೆಗೆ ಹೋಗುತ್ತಿದ್ದಾರೆ|
ಕೊಪ್ಪಳ(ಜೂ.20): ಎಚ್. ವಿಶ್ವನಾಥ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದು, ಯಾರಿಗೂ ಮೋಸ, ಅನ್ಯಾಯ ಮಾಡುವ ಜಾಯಮಾನ ಅವರದಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎಚ್. ವಿಶ್ವನಾಥಗೆ ಅನ್ಯಾಯ ಎಂಬ ಕೃಷ್ಣ ಬೈರೇಗೌಡ ಹೇಳಿಕೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೃಷ್ಣ ಬೈರೇಗೌಡರಿಗೆ ಹಿಂದೆ, ಮುಂದೆ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ರಾಜಿನಾಮೆ ನೀಡಿದ್ದ 17 ಶಾಸಕರ ಪೈಕಿ, 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಎಚ್. ವಿಶ್ವನಾಥ ಹೊರತುಪಡಿಸಿ, ಎಂಟಿಬಿ ನಾಗರಾಜ ಮತ್ತು ಆರ್. ಶಂಕರ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಪ್ರತಾಪಗೌಡ್ ಪಾಟೀಲ್ ಮತ್ತು ಮುನಿರತ್ನ ಅವರು ಚುನಾವಣೆಗೆ ಹೋಗುತ್ತಿದ್ದಾರೆ.
ಕೊಪ್ಪಳದಲ್ಲಿ ಮತ್ತೆ ಕೊರೋನಾ ಅಬ್ಬರ: ಜಿಂದಾಲ್ ನೌಕರ ಸೋಂಕು ದೃಢ
ವಿಶ್ವನಾಥ ಕುರಿತಾಗಿ ಮುಖ್ಯಮಂತ್ರಿ ಬಳಿ ನಾನು, ಬಿ.ಸಿ. ಪಾಟೀಲ್ ಸೇರಿ ಎಲ್ಲರೂ ಚರ್ಚೆ ನಡೆಸಿದ್ದೇವೆ. ಏನೋ ಒಂದು ಸಣ್ಣ ಸಮಸ್ಯೆ ಆಗಿದ್ದು ಎಲ್ಲರ ಗಮನಕ್ಕಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ಸ್ವತಃ ವಿಶ್ವನಾಥ ಕೂಡ ಸ್ವೀಕರಿಸಿದ್ದಾರೆ. ಬಿಎಸ್‌ವೈ ಈವರೆಗೂ ನುಡಿದಂತೆ ನಡೆದಿದ್ದು, ಯಾರಿಗೂ ಮೋಸ, ಅನ್ಯಾಯ ಮಾಡುವುದು ಅವರ ಜಾಯಮಾನ ಅಲ್ಲ ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿ ತಾಕತ್ತಿದ್ದರೆ ಚೀನಾ ವಸ್ತುಗಳನ್ನು ನಿರ್ಬಂಧಿಸಲಿ ಎಂಬ ಸಂಸದ ಡಿ.ಕೆ. ಸುರೇಶ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸೋಮಶೇಖರ್, ಡಿಕೆಸು ತಮ್ಮ ಲಿಮಿಟ್‌ನಲ್ಲಿ ಮಾತನಾಡಬೇಕು. ತಮ್ಮ ಕ್ಷೇತ್ರ ವ್ಯಾಪ್ತಿಯ ವಿಷಯದ ಬಗ್ಗೆ ಮಾತಾಡಬೇಕು. ಅದನ್ನು ಬಿಟ್ಟು ಪ್ರಧಾನಿ ತಾಕತ್ತಿನ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಏನು ಮಾಡುತ್ತಿದ್ದಾರೆ, ಅವರ ತಾಕತ್ತು ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಚೀನಾ ವಸ್ತುಗಳ ಬಗ್ಗೆ ಪ್ರಧಾನಿ ಏನು ಮಾಡಬೇಕೋ ಅದನ್ನು ಖಂಡಿತ ಮಾಡುತ್ತಾರೆ. ಡಿಕೆಸು ಮಾತು ಕೇಳಿ ನಾವು ಚಾಲೆಂಜ್ ಸ್ವೀಕಾರ ಮಾಡಬೇಕಿಲ್ಲ ಎಂದರು.
ಪ್ರತ್ಯೇಕ ಡಿಸಿಸಿ ಬ್ಯಾಂಕ್‌ಗೆ ಕ್ರಮ
ಪ್ರತ್ಯೇಕ ಜಿಲ್ಲೆಯಾಗಿ ಎರಡು ದಶಕ ಕಳೆದರೂ ಇನ್ನು ಕೊಪ್ಪಳದಲ್ಲಿ ಪ್ರತ್ಯೇಕ ಜಿಲ್ಲಾ ಅಗ್ರಣೀಯ ಬ್ಯಾಂಕ್ ಇಲ್ಲ. ಪ್ರತ್ಯೇಕ ಡಿಸಿಸಿ ರಚಿಸಲು ಇಲ್ಲಿನ ಜನಪ್ರತಿನಿಧಿಗಳ ಒತ್ತಾಯವಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೆ ಎರಡು ಬಾರಿ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕವಾಗಿ ಮಾತನಾಡಿದ್ದೇವೆ. ಕೊಪ್ಪಳ ಹಾಗೂ ರಾಯಚೂರಿಂದ ಜನಪ್ರತಿನಿಧಿಗಳು, ನಬಾರ್ಡ್ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಸಾಲ ನೀಡಲು ಸೂಚನೆ
ಜಿಲ್ಲಾ ಬ್ಯಾಂಕ್, ಸಹಕಾರಿ ಸಂಘಗಳಿಂದ ರೈತರಿಗೆ ಸಾಲ ನೀಡಲು ಸೂಚಿಸಲಾಗಿದೆ. 14500 ಕೋಟಿ ಸಾಲ ನೀಡಲು ಯೋಜನೆ ರೂಪಿಸಲಾಗಿದೆ. 21 ಡಿಸಿಸಿ ಬ್ಯಾಂಕ್, ಅಫೆಕ್ಸ್ ಬ್ಯಾಂಕ್‌ಗಳಿಗೆ ಸಾಲ ನೀಡಲು ಸೂಚಿಸಲಾಗಿದೆ. ಇದರ ಆನ್‌ಲೈನ್ ವ್ಯವಸ್ಥೆ ಕೂಡ ಆಗಿದೆ ಎಂದು ಸಚಿವರು ತಿಳಿಸಿದರು.