ಗೃಹ ಸಚಿವರ ಹೆಸರು ಹೇಳಿದರೂ ದಂಡ!
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಲಾಗುತ್ತಿದೆ. ಗೃಹ ಸಚಿವರ ಹೆಸರು ಹೇಳಿದರು ದಂಡ ಬೀಳುತ್ತಿದೆ.
ಬೆಂಗಳೂರು [ಸೆ.12]: ಸಂಚಾರ ದಂಡಾಸ್ತ್ರವೂ ಸಾಮಾನ್ಯ ಜನರಿಗೆ ಮಾತ್ರವಲ್ಲ, ರಾಜ್ಯ ಗೃಹ ಸಚಿವರ ಹೆಸರು ಹೇಳಿದರೂ ಸಹ ಬಿಡದೆ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಪಾನಮತ್ತರಾಗಿ ವಾಹನ ಚಾಲನೆ ಮಾಡಿದ ತಪ್ಪಿಗೆ ಸಚಿವರ ಸಂಬಂಧಿ ಎನ್ನಲಾದ ವ್ಯಕ್ತಿ 15 ಸಾವಿರ ರು. ದಂಡ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಾಲುಕ್ಯ ವೃತ್ತ ಸಮೀಪ ರೇಸ್‌ಕೋರ್ಸ್ ರಸ್ತೆಯಲ್ಲಿ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು, ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅದೇ ಮಾರ್ಗದಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸಿಕೊಂಡು ವ್ಯಕ್ತಿಯೊಬ್ಬರು ಬಂದಿದ್ದಾರೆ. ಆ ಕಾರನ್ನು ಅಡ್ಡಗಟ್ಟಿದ ಪೊಲೀಸರು, ಮದ್ಯ ಸೇವನೆ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದಕ್ಕೆ ಆಕ್ಷೇಪಿಸಿದ ಆತ, ‘ನಾನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಂಬಂಧಿಕ’ ಎಂದಿದ್ದಾನೆ. ಅಲ್ಲದೆ ಯಾರಿಗೋ ಮೊಬೈಲ್ ಕರೆ ಮಾಡಿ ಪೊಲೀಸರಿಗೆ ಮಾತನಾಡಿಸಲು ಆ ವ್ಯಕ್ತಿ ಯತ್ನಿಸಿದ್ದಾನೆ. ಆದರೆ ಈ ಮಾತಿಗೆ ಬಗ್ಗದ ಪೊಲೀಸರು, ಮದ್ಯ ಸೇವಿಸಿ ಕಾರು ಚಾಲನೆಗೆ .
10 ಸಾವಿರ ರು. ಹಾಗೂ ಚಾಲನಾ ಪರವಾನಿಗೆ ಇಲ್ಲದ ಕಾರಣಕ್ಕೆ 5 ಸಾವಿರ ರು. ಸೇರಿ ಒಟ್ಟು 15 ಸಾವಿರ ರು. ದಂಡ ವಿಧಿಸಿದ್ದಾರೆ. ಕೊನೆಗೆ ದಂಡ ಪಾವತಿಸಿ ಆತ, ತನ್ನ ಸ್ನೇಹಿತನನ್ನು ಕರೆಸಿಕೊಂಡು ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿದೆ.