ಗೋಕಾಕ(ಜೂ.07): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾಂಗ್ರೆಸ್‌ ಪಕ್ಷದಲ್ಲಿ ಏಕಾಂಗಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹರಿಹಾಯ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳುತ್ತೇನೆ ಎಂದಿರುವ ಡಿಕೆಶಿ ಹತಾಶನಾಗಿದ್ದಾರೆ. ಸುಳ್ಳು ಮಾತನಾಡಿದ್ದರೆ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉರುಳುತ್ತಿರಲಿಲ್ಲ ಎಂಬುದು ಡಿಕೆಶಿ ಮರೆತಿರಬಹುದು. ಮುಂದೆ ಅವರಿಗೆ ತಿಳಿಯುತ್ತದೆ. ಡಿ.ಕೆ.ಶಿವಕುಮಾರ ಅವರ ಬಾಡಿ ಲ್ಯಾಂಗ್ವೇಜ್‌ ನೋಡಿದರೆ ಗೊತ್ತಾಗುತ್ತೆ ಅವರು ಹತಾಶೆಯಾಗಿ ಮಾತನಾಡುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಒಬ್ಬ ಮಹಾನ ನಾಯಕ. ಅವರ ಪಕ್ಷ ಬೇರೆ ಇದ್ದರು ಸಹ ಅವರು ನಮ್ಮ ನಾಯಕರು. ಅವರ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

‘ಕೆಲವು ಮೆಂಟಲ್‌ಗಳು ಈಗ ಮನ ಬಂದಂತೆ ಮಾತಾಡ್ತಾರೆ’

ಡಿ.ಕೆ.ಶಿವಕುಮಾರ್‌ ಅವರಿಗೆ ಸೂಕ್ತ ವೇದಿಕೆಯಲ್ಲೇ ಉತ್ತರ ನೀಡುವುದಾಗಿ ತಿರುಗೇಟು ನೀಡಿದ್ದಾರೆ. ಕೆಲ ಮೆಂಟಲ್‌ಗಳು ಏನೇನೋ ಮಾತನಾಡುತ್ತಾರೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವಾಗ ಸಂದರ್ಭಕ್ಕನುಗುಣವಾಗಿ ಚಾಮರಾಜನಗರದಲ್ಲಿ ಮಾತನಾಡಿದ್ದೇನೆ. ಆದರೆ, ಅದನ್ನೇ ಪದೇ ಪದೇ ಹೇಳಿದರೆ ಅದಕ್ಕೆ ಮಹತ್ವ ಬರುವುದಿಲ್ಲ. ಏಕೆಂದರೆ, ನಮ್ಮದು ರಾಷ್ಟ್ರೀಯ ಪಕ್ಷ. ಈ ಕುರಿತು ನಮ್ಮ ಹೈಕಮಾಂಡ್‌ ಜೊತೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.