ಸಂಪುಟದಿಂದ ನಾಗೇಶ್‌ ಹೊರಹೋಗುತ್ತಾರೆ ಎಂಬುದು ನನಗೆ ಕಲ್ಪನೆ ಇರಲಿಲ್ಲ| ಮುನಿರತ್ನ, ಮಹೇಶ್‌ ಕುಮಟಳ್ಳಿ ಸೇರಿ ಇನ್ನೂ ಹಲವರಿಗೆ ಮಂತ್ರಿ ಸ್ಥಾನ ದೊರೆಯಬೇಕಿದೆ| ಬಿಎಸ್‌ವೈ ಬ್ಲಾಕ್‌ಮೇಲ್‌ಗೆ ಹೆದರಲ್ಲ| 

ಬೆಳಗಾವಿ(ಜ.15): ಬಿಜೆಪಿ ಸರ್ಕಾರ ರಚನೆಯಲ್ಲಿ ಸಿ.ಪಿ.ಯೋಗೇಶ್ವರ್‌ ಪಾತ್ರ ಪ್ರಮುಖವಾಗಿದ್ದು, ವಲಸೆ ಬಂದ ಶಾಸಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕಷ್ಟಪಟ್ಟಿರುವ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಸರಿಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

"

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್‌ ತಮ್ಮ ಮನೆಯ ಮೇಲೆ 9 ಕೋಟಿ ಸಾಲ ಮಾಡಿ ನಮ್ಮನ್ನು ರಕ್ಷಣೆ ಮಾಡಿದರು. ಎಂಟಿಬಿ ನಾಗರಾಜ್‌ ಅವರಿಂದ ಸಾಲ ಪಡೆದುಕೊಂಡಿದ್ದರು. ರಿಸ್ಕ್‌ ತೆಗೆದುಕೊಂಡು, ತಮ್ಮ ಆರೋಗ್ಯ ಹಾಳು ಮಾಡಿಕೊಂಡು ನಮ್ಮನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಒಳ್ಳೆಯ ವಿಚಾರ ಎಂದು ಹೇಳಿದರು. ಸಂಪುಟದಿಂದ ನಾಗೇಶ್‌ ಹೊರಹೋಗುತ್ತಾರೆ ಎಂಬುದು ನನಗೆ ಕಲ್ಪನೆ ಇರಲಿಲ್ಲ. ಮುನಿರತ್ನ, ಮಹೇಶ್‌ ಕುಮಟಳ್ಳಿ ಸೇರಿ ಇನ್ನೂ ಹಲವರಿಗೆ ಮಂತ್ರಿ ಸ್ಥಾನ ದೊರೆಯಬೇಕಿದೆ ಎಂದರು.

ನಮ್ಮ ಟೀಂನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ದೊರೆಯಬೇಕಿದೆ: ರಮೇಶ ಜಾರಕಿಹೊಳಿ

ಇದೇ ವೇಳೆ ಶಾಸಕ ರೇಣುಕಾಚಾರ್ಯ ಅವರು ಯೋಗೇಶ್ವರ್‌ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರ ಬಳಿ ಸಚಿವರ ಬಗ್ಗೆ ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಬಿಎಸ್‌ವೈ ಬ್ಲಾಕ್‌ಮೇಲ್‌ಗೆ ಹೆದರಲ್ಲ:

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿ.ಡಿ, ಬ್ಲಾಕ್‌ಮೇಲ್‌ಗೆ ಹೆದರುವ ಮನುಷ್ಯರಲ್ಲ. ಅವರು, ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಸಂಪೂರ್ಣವಾಗಿ ಬೆನ್ನೆಲುಬಾಗಿ ಇರುತ್ತೇವೆ ಎಂದರು.