ಚಿಕ್ಕೋಡಿ(ಜೂ.17): ನಾನು ಜೆಡಿಎಸ್‌ಗೆ ಹೋಗುತ್ತೇನೆ ಎನ್ನುವುದು ನನ್ನ ವೈರಿಗಳ ಕುತಂತ್ರ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಕೋವಿಡ್‌ 19 ಮತ್ತು ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ನಡೆಸಿದ ತಾಲೂಕು ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಮತ್ತು ಸಂಘ ಪರಿವಾರ ನನಗೆ ಆಶೀರ್ವಾದ ಮಾಡಿದೆ. ಆಕಸ್ಮಾತ್‌ ರಾಜಕೀಯ ವೈಮನಸ್ಸು ಉಂಟಾದರೆ ಮನೆಯಲ್ಲಿ ಇರುತ್ತೇನೆ ಹೊರತು ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್‌ ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಡಿ ದೇಶದಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಯಾವುದೇ ಮುಖ್ಯಮಂತ್ರಿ ಮಾಡದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ, ಶಿಸ್ತಿನ ಪಕ್ಷ. ಮುಖ್ಯಮಂತ್ರಿ ಬದಲಾವಣೆ ಸಣ್ಣ ವಿಷಯವಲ್ಲ, ಮಾಧ್ಯಮಗಳಲ್ಲಿ ಈ ವಿಷಯ ಮಾತನಾಡುವುದಿಲ್ಲ ಎಂದರು.
ಡಿಸಿಸಿ ಬ್ಯಾಂಕ್‌ನಲ್ಲಿ ಬಾಲಚಂದ್ರ ಜಾರಕಿಹೊಳಿ, ಉಮೇಶ್‌ ಕತ್ತಿ, ಲಕ್ಷ್ಮಣ ಸವದಿ ಯಾವುದೇ ಬಣಗಳಿಲ್ಲ. ನನಗೆ ಯಾವ ಬಣವೂ ಸಂಬಂಧ ಇಲ್ಲ. ನಾನು ಆ ಕಡೆ ತಲೆ ಹಾಕುವುದಿಲ್ಲ. ಉಮೇಶ್‌ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕ ಸಹಕಾರಿ ರಂಗದ ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ಪಕ್ಷ ಜಾತಿಯ ಸಂಬಂಧವಿಲ್ಲ ಎಂದು ಹೇಳಿದರು.

ಒಂದೇ ವೇದಿಕೆಯಲ್ಲಿ ಲಕ್ಷ್ಮೀ-ಸಾಹುಕಾರ, ಅಬ್ಬಬ್ಬಾ 'ಕೊಳಚೆ' ಮಾತಿನ ಸಮರ

ಮಾಜಿ ಸಂಸದ ರಮೇಶ ಕತ್ತಿ ಅವರ ಅಸಮಾಧಾನದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಬಿಜೆಪಿಯಲ್ಲಿ ನನಗೆ ಹಿಂಸೆ ಆಗುತ್ತಿದೆ, ನನ್ನ ಸಹೋದರನಿಗೆ ಮಂತ್ರಿ ಸ್ಥಾನ ನೀಡಿಲ್ಲವೆಂದು ರಮೇಶ ಕತ್ತಿ ಆರೋಪ ಮಾಡಿಲ್ಲ. ಅದೆಲ್ಲ ಸುಳ್ಳು. ಅವರು ಅಸಮಾಧಾನ ಹೊಂದಿಲ್ಲ. ಉಮೇಶ್‌ ಕತ್ತಿ ಅವರು ಮಂತ್ರಿ ಆಗಲೇಬೇಕೆಂದೇನಿಲ್ಲ. ಅವರು ಮಂತ್ರಿಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡರು.

ಒಂದು ವೇಳೆ ಬಿಜೆಪಿ ಉಮೇಶ್‌ ಕತ್ತಿ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾದರೆ ನೀವು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ಅದಿಲ್ಲ. ನಾವು ಯಡಿಯೂರಪ್ಪ ಅವರ ಜತೆಗೆ ಇರುತ್ತೇವೆ ಎಂದು ಹೇಳಿದರು.