ಬೆಳಗಾವಿ[ಮಾ.08]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿವೃದ್ಧಿ ಪೂರಕ ಬಜೆಟ್‌ ಮಂಡಿಸಿದ್ದಾರೆ. ದರಿದ್ರ ಅನ್ನೋರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದೀನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರೋಧಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್‌ ಕೊಟ್ಟಿದ್ದಾರೆ.

ಎಂ.ಕೆ.ಹುಬ್ಬಳ್ಳಿಯಲ್ಲಿ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ಸ್ಥಳೀಯ ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಜೆಟ್‌ ಬಗ್ಗೆ ಜನ ತೀರ್ಮಾನಿಸ್ತಾರೆ. ಯಾರದ್ದು ದರಿದ್ರ ಸರ್ಕಾರ ಅಂತ ಜನರೇ ಹೇಳ್ತಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಚಡಿ ಏತ ನೀರಾವರಿ ಯೋಜನೆ ಸೇರಿ ಜಿಲ್ಲೆ ಹಾಗೂ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುವೆ ಜೊತೆಗೆ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇನೆ ಎಂದು ಬರವಸೆ ನೀಡಿದರು.

ಮಹದಾಯಿ ಯೋಜನೆಗಾಗಿ ಬಜೆಟ್‌ನಲ್ಲಿ ಈಗಾಗಲೇ ಸಿಎಂ ಅವರು 500 ಕೋಟಿಯಷ್ಟುಮೀಸಲಿಟ್ಟಿದ್ದು, ತಮ್ಮ ಈ 3ವರ್ಷದ ಅವಧಿಯಲ್ಲಿ ಮಹದಾಯಿ, ಕಳಸಾಬಂಡೂರಿ ಯೋಜನೆಗೆ ಅಗತ್ಯ ಅನುದಾನ ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು.

ಕೃಷ್ಣಾನದಿ ಮೇಲ್ದಂಡೆ ಯೋಜನೆಗೆ 3 ವರ್ಷದ ಅವಧಿಯಲ್ಲಿ 30 ಸಾವಿರ ಕೋಟಿ ಅನುದಾನ ಅಗತ್ಯವಿದ್ದು, ಬಜೆಟ್‌ ಹೊರತುಪಡಿಸಿ ಈಗ .10 ಸಾವಿರ ಕೋಟಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ಅಭಿವೃದ್ಧಿಗೆ ಅದ್ಯತೆ ನೀಡುತ್ತೇನೆ. ಜೊತೆಗೆ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಮತ್ತು ಸುವರ್ಣ ವಿಧಾನಸೌದಕ್ಕೆ ಅಗತ್ಯ ಕಚೇರಿ ಸ್ಥಳಾಂತರಿಸಲಾಗುವುದು ಎಂದರು.

ಸರ್ಕಾರದ ಮುಖ್ಯಸಚೇತಕ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಮನೆಗೆ ಕಳಿಸುವ ಮೂಲಕ ತಮ್ಮ 17 ಶಾಸಕರೊಂದಿಗೆ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತಂದು ಬಿ.ಎಸ್‌.ಯಡಿಯೂರಪ್ಪನವರನ್ನು ಸಿಎಂ ಮಾಡಲು ಕಾರಣಿಕರ್ತರಾದ ರಮೇಶ ಜಾರಕಿಹೊಳಿ ಅವರು ಈಗ ಬೆಳಗಾವಿ ಜಿಲ್ಲೆಗೆ ಎರಡನೇ ಬಾರಿಗೆ ಅವರ ಮೂಲಕ ನೀರಾವರಿ ಸಚಿವ ಸ್ಥಾನ ಬಂದಿದ್ದು, ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಜೊತೆಗೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದ ಅವರು, ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕರಾದ ವಿ.ಐ.ಪಾಟೀಲ, ಅರವಿಂದ ಪಾಟೀಲ, ಕಿತ್ತೂರು ಮಂಡಳ ಮಾಜಿ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ನೂತನ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಬಸನಗೌಡ ಶಿದ್ರಾಮನಿ, ವಿ.ಎಸ್‌.ಸಾಲಿಮಠ, ಶ್ರೀಶೈಲ ತಿಗಡಿ, ಚನ್ನಬಸಪ್ಪ ಮೊಖಾಶಿ, ಮೂಗಬಸವ ಹಾಗೂ ಮತ್ತಿತರ ಗಣ್ಯರು ಇದ್ದರು.

ಶಾಸಕ ಮಹಾಂತೇಶ ದೊಡಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ, ನೂತನ ಯೋಜನೆ ನೀಡುವಂತೆ ವಿನಂತಿಸಿದರು.

ನೂತನವಾಗಿ ಆಯ್ಕೆಯಾದ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಿಗೆ ಹಾಗೂ ನಿವೃತ್ತಿಯಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸಿಬ್ಬಂದಿ ಹಾಗೂ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡಳ ಪ್ರಧಾನ ಕಾರ್ಯದರ್ಶಿ ಶಿವಾನಂದ ಹನುಮಸಾಗರ ನಿರೂಪಿಸಿ, ವಂದಿಸಿದರು.

ಪಕ್ಷದ ಬೆನ್ನಿಗೆ ಯಾರು ಚೂರಿ ಹಾಕಿಲ್ಲವೋ ಅವರನ್ನು ನಮ್ಮ ಪಕ್ಷ ಎಂದಿಗೂ ಕೈಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಶನಿವಾರ ಪಿಕೆಪಿಎಸ್‌ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿಜೆಪಿ ಮಂಡಳ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಡಿಸಿಎಂ ಹುದ್ದೆ ನಾನು ಬೇಡಿರತಕ್ಕದ್ದಲ್ಲ. ನಾನು ಬಯಸಿದ್ದೂ ಅಲ್ಲ. ಹರ ಮುನಿದರೂ ಗುರು ಕಾಯುವನು ಎಂದು ನಾನು ಹೇಳಿದ್ದೆ. ಆದರೆ, ಅದು ಬೆಂಗಳೂರಿನ ಪತ್ರಕರ್ತರಿಗೆ ಅರ್ಥವಾಗಲಿಲ್ಲ ಎಂದರು.

ಹರ ಎಂದರೆ ಜನ, ಗುರು ಎಂದರೆ ನನ್ನ ಪಕ್ಷ . ಜನ ಮುನಿದರೂ ಪಕ್ಷ ನನ್ನನ್ನು ಕಾಪಾಡಿದೆ. ಬೇರೆ ಪಕ್ಷಕ್ಕೆ ಮತ್ತು ಬಿಜೆಪಿಗೆ ಏನೂ ವ್ಯತ್ಯಾಸವೇನು ಎಂಬುದನ್ನು ನೀವು ತಿಳಿದಿದ್ದೀರಿ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಯಾರಾದರು ಸೋತರೆ ಅವನು ಸತ್ತಂತೆ. ಪಕ್ಷಕ್ಕೆ ನಿಷ್ಠೆಯಾಗಿ, ದ್ರೋಹ ಮಾಡದೇ ಇರುವ ಕಾರಣ ನನ್ನನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂದು ಪಕ್ಷದಲ್ಲಿರುವ ತಮ್ಮ ವಿರೋಧಿಗಳಿಗೆ ಟಾಂಗ್‌ ನೀಡಿದರು.

ಸಚಿವ ಸ್ಥಾನ ನೀಡಿ ಎಂದ ವರಿಷ್ಠರು:

ಬೇರೆ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಏನು ವ್ಯತ್ಯಾಸ ಎಂದರೆ ನನ್ನ ನೋಡಿದರೆ ಗೊತ್ತಾಗುತ್ತದೆ. ನನ್ನ ಮಂತ್ರಿ ಮಾಡಿ ಸಿಎಂ ಯಡಿಯೂರಪ್ಪ ಅವರಿಗೆ ಪಟ್ಟಿಕಳಿಸಿದ್ದ ವೇಳೆ ಅವರಿಗೆ ಕನ್‌ಫ್ಯೂಷನ್ ಆಗಿತ್ತು. ಸ್ಪೆಲ್ಲಿಂಗ್‌ ಮಿಸ್ಟೇಕ್‌ ಆಗಿರಬಹುದು ಎಂದು ಯಡಿಯೂರಪ್ಪಗೆ ಕನ್‌ಫ್ಯೂಷನ್ ಆಗಿತ್ತು. ಸಿದ್ದು ಸವದಿಯಾ? ಇಲ್ಲವೇ ಲಕ್ಷ್ಮಣ ಸವದಿಯಾ ಎಂದು ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ಅನ್ನು ಕೇಳಿದರು. ಆಗ ಅವರು ಡಿಫೀಟೆಡ್‌ ಕ್ಯಾಂಡಿಡೇಟು (ಸೋತ ಅಭ್ಯರ್ಥಿ), ಕಿಸಾನ್‌ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ ಎಂದು ಹೇಳಿದರು. ಆಗ ನನ್ನ ಮೊಬೈಲ್‌ ಸ್ವಿಚ್ಡ್ ಆಫ್‌ ಆಗಿದ್ದರಿಂದ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ, ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿದ್ದಾರೆ. ತಕ್ಷಣ ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದರು.

ನನ್ನ ಮೊಬೈಲ್‌ ಆನ್‌ ಮಾಡಿದ ತಕ್ಷಣವೇ ಎಲ್ಲರ ಮೆಸೇಜ್‌ ನೋಡಿ ನನಗೆ ಆಶ್ಚರ್ಯವಾಯಿತು. ಬೆಳಗ್ಗೆ 5 ಗಂಟೆಗೆ ಆನ್‌ಲೈನ್‌ನಲ್ಲಿ ಇಂಡಿಗೋ ಫ್ಲೈಟ್‌ ಬುಕ್‌ ಮಾಡಿ ಬೆಂಗಳೂರಿಗೆ ಹೋದೆ. ಸಂಜೆ ಅಮಿತ್‌ ಶಾ ಫೋನ್‌ ಮಾಡಿ ನಾಳೆ ನೀನು ರಾಜ್ಯದ ಡಿಸಿಎಂ ಆಗುತ್ತೀಯಾ ಎಂದು ಹೇಳಿದರು. ಒಬ್ಬ ಕಾರ್ಯಕರ್ತನನ್ನು ಪಕ್ಷ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದರು.

ದೊಡ್ಡಗೌಡರ ಬಗ್ಗೆ ಸವದಿ ಮೆಚ್ಚುಗೆ:

ಸೋತವನನ್ನು ಕರೆದು ಡಿಸಿಎಂ ಮಾಡಿದ್ದ ನಮ್ಮ ಪಕ್ಷ ಮಾತ್ರ. ನಮ್ಮ ಮಾಧ್ಯಮ ಮಿತ್ರರು ಮಾತ್ರ ಇನ್ನೇನು ಸವದಿ ಕತೆ ಮುಗಿದೇ ಬಿಟ್ಟಿತ್ತೆಂದು ಶುರು ಮಾಡಿದರು. ಆಗ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ನನ್ನ ಬಳಿ ಬಂದು ನಾನು ಕಿತ್ತೂರಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನೀವು ನಿಂತು ಆರಿಸಿ ಬನ್ನಿ ಎಂದಿದ್ದರು. ಎರಡು ಮನಸು ಕೂಡಿದಲ್ಲಿ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಇಂತಹ ಪ್ರಾಮಾಣಿಕ ಸ್ನೇಹಿತನನ್ನು ಪಡೆದಿದ್ದೇನೆ ಎಂಬ ಹೆಮ್ಮೆ, ಗರ್ವ ನನಗಿದೆ. ನಿನ್ನ ಹೆಗಲಿಗೆ ಹಗಲು ಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಕಿತ್ತೂರು ಭಾಗದ ಅಭಿವೃದ್ಧಿಗೆ ನಾನು ನಿನ್ನ ಜೊತೆ ಇರುತ್ತೇನೆ ಎಂದು ಸವದಿ ಅವರು ಮಹಾಂತೇಶ ದೊಡ್ಡಗೌಡರ ಅವರಿಗೆ ಭರವಸೆ ನೀಡಿದರು.