ಮಳೆಗಾಲ ಮುಗಿತ್ತಿದ್ದಂತೆ ಬಿಬಿಎಂಪಿ 225 ವಾರ್ಡ್‌ಗಳ ಚುನಾವಣೆ; ಬಿಗ್ ಅಪ್ಡೇಟ್ ಕೊಟ್ಟ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿಗೆ ಮಳೆಗಾಲ ಮುಗಿಯುತ್ತಿದ್ದಂತೆ 225 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಜೂ.10): ಕರ್ನಾಟಕದ ಅತಿದೊಡ್ಡ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ 1 ಕೋಟಗೂ ಅಧಿಕ ಜನರನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಾಲ್ಕು ವರ್ಷದ ಬಳಿಕ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಹೂರ್ತ ನಿಗದಿ ಮಾಡಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬಿಬಿಎಂಪಿಯ 225 ವಾರ್ಡ್‌ಗಳಿಗೆ ಚುನಾವಣೆ (BBMP Elections) ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಬೆಂಗಳೂರಿನ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿದರು. ಈ ವೇಳೆ ಬಿಬಿಎಂಪಿ ವಾರ್ಡ್ ವಿಂಗಡಣೆ ಬಗ್ಗೆ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನ ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರಿಲ್ಲದೇ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ, ಎಲ್ಲ ಬಿಬಿಎಂಪಿ ವಾರ್ಡ್‌ಗಳು (BBMP 225 Wards) ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮನವಿ ಮಾಡಿದರು.
ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬೆಂಗಳೂರು ನಗರಾಭಿವೃದ್ದಿ ಕುರಿತ ಸಭೆಯಲ್ಲಿ ಭಾಗವಹಿಸಿ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು,ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡಬೇಕು ಅಂತ ಚರ್ಚೆ ಆಗಿದೆ. ಇನ್ನೂ ಬಹಳ ದಿನಗಳ ಕಾಲ ಬಿಬಿಎಂಪಿ ಚುನಾವಣೆ ಮುಂದೂಡಲು ಆಗಲ್ಲ. ಈಗಾಗಲೇ ಕೋರ್ಟ್ ಚುನಾವಣೆಗೆ ನಿರ್ದೇಶನ ನೀಡಿದೆ. ಹೀಗಾಗಿ, ಸದರಿ 225 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಇನ್ನು ಬಿಬಿಎಂಪಿ ಚುನಾವಣೆಗೆ ಇರುವ ಕಾನೂನು ತೊಡಕು ಹಾಗೂ ಮೀಸಲಾತಿ ಬಗೆ ಹರಿಸಿ ಚುನಾವಣೆ ಮಾಡಲಿದ್ದೇವೆ. ಮಳೆಗಾಲ ಮುಗಿತ್ತಿದ್ದಂತೆ ಬಿಬಿಎಂಪಿ ಚುನಾವಣೆ ಮಾಡ್ತೆವೆ. ಲೋಕಸಭಾ ಚುನಾವಣೆ ಫಲಿತಾಂಶದ ಸೋಲಿನ ಚರ್ಚೆ ಆಗಿಲ್ಲ. ಈ ಬಗ್ಗೆ ಯಾರು ಮಾತನಾಡಲಿಲ್ಲ. ಕೇವಲ ಬಿಬಿಎಂಪಿ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಪಾಲಿಕೆ ಚುನಾವಣಾ ಕಾರ್ಯಕ್ಕೆ ಪಕ್ಷದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
Bengaluru- ಬಿಬಿಎಂಪಿ ಚುನಾವಣೆಗೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ
ಕಾಂಗ್ರೆಸ್ ಗ್ಯಾರಂಟಿ ನಿಲ್ಲಲ್ಲ:
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವೆಂದು ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ರಾಜ್ಯದಲ್ಲಿ 2028ರಲ್ಲಿ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆದರೂ ನಮ್ಮ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ, ಮುಂದಿನ 9 ವರ್ಷವೂ ಗ್ಯಾರಂಟಿಗಳು ಮುಂದುವರೆಯುತ್ತವೆ. ಶಕ್ತಿ ಯೋಜನೆ ಜಾರಿಗೊಂಡು ಒಂದು ವರ್ಷ ಆಗ್ತಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಕೊಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.