ಮಂಗಳೂರು(ಆ.09): ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮರ, ವಿದ್ಯುತ್‌ ಕಂಬ ಬಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿ ಹಾನಿಯಾಗುವುದು ಸೇರಿದಂತೆ ಮನೆಯೊಳಗೆ ಒಂಚೂರು ನೀರು ಬಂದರೂ ತಕ್ಷಣ 10 ಸಾವಿರ ಪರಿ​ಹಾರ ನೀಡಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆಯನ್ನು ನೀಡಿದರು. ಪ್ರವಾಹದಿಂದ ಸಂತ್ರಸ್ತರಾದವರಿಗೆ ಆಶ್ರಯ ನೀಡಲಾಗುವ ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರದ ಕ್ರಮವನ್ನು ನಿರಂತರವಾಗಿ ಬದಲಿಸುತ್ತಿರಬೇಕು. ಪೌಷ್ಟಿಕ ಆಹಾರ ಒದಗಿಸಬೇಕು. ಪ್ರವಾಹ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಗೆ 5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಪಶ್ಚಿಮ ಘಟ್ಟತಪ್ಪಲಿನಲ್ಲಿ ಪ್ರವಾಹ ಆತಂಕ: ಚಾರ್ಮಾಡಿ ಘಾಟ್‌ ರಸ್ತೆಯಲ್ಲೇ ಬಿರುಕು

ಹಣದ ಕೊರತೆ ಇಲ್ಲ: 

ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ 310 ಕೋಟಿ ನೀಡಿದೆ. ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಅಶೋಕ್‌ ಹೇಳಿದರು. ಶಾಸಕ ರಾಜೇಶ್‌ ನಾಯ್ಕ, ಶಾಸಕ ಉಮಾನಾಥ ಕೋಟ್ಯಾನ್‌, ಡಾ. ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಸಂಜೀವ ಮಠಂದೂರು, ಪ್ರತಾಪ್‌ ಸಿಂಹ ನಾಯಕ್‌ ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಚಿವರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಇತರರಿದ್ದರು.