ಬಾಗಲಕೋಟೆ(ಆ.26): ರಾಜ್ಯದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 2 ಕಂತಿನಲ್ಲಿ ಹಣ ಬಿಡುಗಡೆ ಮಾಡಿದ್ದು, ಒಟ್ಟು 527 ಕೋಟಿ ಹಣ ಕೇಂದ್ರದ ಎನ್‌ಡಿಆರ್‌ಎಫ್‌ನಿಂದ ಬಂದಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ 950 ಕೋಟಿ ಹಣ ರಾಜ್ಯಕ್ಕೆ ಪ್ರಸಕ್ತ ಅವ​ಧಿಯಲ್ಲಿ ಬರಬೇಕಾಗಿತ್ತು. ಅದರಲ್ಲಿ ಸದ್ಯ ಬಿಡುಗಡೆ ಮಾಡಲಾದ ಎನ್‌ಡಿಆರ್‌ಎಫ್‌ ಹಣವನ್ನು ಬಳಸಿಕೊಂಡು ರಾಜ್ಯದಲ್ಲಿನ ಪ್ರವಾಹ ಹಾಗೂ ಮಳೆಯಿಂದಾದ ಹಾನಿ ಸರಿಪಡಿಸುವ ಕಾರ್ಯ ಭರದಿಂದ ನಡೆದಿದೆ ಎಂದರು.

ಹಣದ ಕೊರತೆ ಇಲ್ಲ:

ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸರ್ಕಾರ ಬಳಿ ಪ್ರವಾಹ ಎದುರಿಸಲು ಹಣ ಇಲ್ಲ ಎಂಬ ವಿರೋಧ ಪಕ್ಷದ ನಾಯಕರ ಮಾತುಗಳಿಗೆ ಯಾವುದೇ ಅರ್ಥವಿಲ್ಲ ಎಂದ ಕಂದಾಯ ಸಚಿವರು, ರಾಜ್ಯದ ಎಲ್ಲ ಡಿಸಿಗಳ ಪಿಡಿ ಅಕೌಂಟ್‌ನಲ್ಲಿ 947 ಕೋಟಿ ಹಣ ಇದೆ. ಹಣವಿಲ್ಲ ಎಂಬ ಮಾತಿಗೆ ಇದೆ ಉತ್ತರ ಎಂದ ಸಚಿವರು, ಆಯಾ ಜಿಲ್ಲಾಧಿ​ಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಪ್ರವಾಹ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಎಲ್ಲಿಯೂ ಹಣದ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯ ಪ್ರವಾಹ ಹಾಗೂ ಮಳೆಯಿಂದಾದ ತೊಂದರೆ ಎದುರಿಸಲು 50 ಕೋಟಿ ಹಣವನ್ನು ಮತ್ತು ರಕ್ಷಣಾ ಸಾಮಗ್ರಿಗಳಿಗಾಗಿ 20 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದೆಡೆ ಜನರ ಸ್ಥಳಾಂತರ ಸಹ ಮಾಡಲಾಗಿದೆ ಎಂದರು.

'ಬಿಜೆಪಿಯವರು ಯಾವ ಮಟ್ಟಕ್ಕೆ ಹೋಗ್ತಾರೆ ಹೇಳಲಾಗದು'

ಡಿಸಿ ಬಳಿ 41 ಕೋಟಿ ಹಣ:

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಮತ್ತಿತರ ಸಮಸ್ಯೆ ಎದುರಿಸಲು ಸದ್ಯ ಜಿಲ್ಲಾಧಿ​ಕಾರಿಗಳ ಪಿಡಿ ಅಕೌಂಟ್‌ ನಲ್ಲಿ 41 ಕೋಟಿ ಹಣವಿದೆ. ಇತ್ತೀಚಿನ ಪ್ರವಾಹ ಹಾಗೂ ಮಳೆಯಿಂದ 218 ಗ್ರಾಮಗಳು ಬಾಧಿತವಾಗಿವೆ. ತೋಟಗಾರಿಕೆ, ಕೃಷಿ, ರೇಷ್ಮೆ ಸೇರಿದಂತೆ ಜಿಲ್ಲೆಯ 34299 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. 999 ಗ್ರಾಮೀಣ ರಸ್ತೆಗಳು ಹಾಳಾಗಿವೆ ಎಂದು ವಿವರಿಸಿದ ಕಂದಾಯ ಸಚಿವರು, ಗ್ರಾಮೀಣ ಕುಡಿಯುವ ನೀರು ಯೋಜನೆ ಸೇರಿದಂತೆ ಇತರ ಸರ್ಕಾರದ ಆಸ್ತಿಗಳ ಹಾನಿಯನ್ನು ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗಿ ಹೇಳಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ಹಾನಿಗೀಡಾದ ಮನೆಗಳಿಗೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗಿದೆ. 11611 ಮನೆಗಳು ಹಾನಿಗೀಡಾಗಿದ್ದರಿಂದ 129 ಕೋಟಿ ಹಣ, 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಗೀಡಾದ ಬೆಳೆಗಳ ಪರಿಹಾರಕ್ಕಾಗಿ 90 ಕೋಟಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ 50 ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಕೋವಿಡ್‌ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ 3.82 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 3.61 ಕೋಟಿ ಹಣವನ್ನು ವ್ಯಯ ಮಾಡಲಾಗಿದೆ. ಮತ್ತೆ 3 ಕೋಟಿ ಹಣವನ್ನು ಕೋವಿಡ್‌ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದರು.

210 ಎಕರೆ ಕಂದಾಯ ಭೂಮಿ ಹಂಚಿಕೆ:

ಕಂದಾಯ ಸಚಿವನಾದ ನಂತರ ಬಾಗಲಕೋಟೆ ಜಿಲ್ಲೆಯ ವಿವಿಧ ಸರ್ಕಾರದ ಯೋಜನೆಗಳಿಗೆ ಹಾಗೂ ಅಗತ್ಯವಾದ ಸೇವೆಗಳಿಗೆ ಬೇಕಾದ ಜಮೀನನ್ನು ಕಂದಾಯ ಇಲಾಖೆಯಿಂದ ನೀಡಲಾಗಿದ್ದು, ಒಟ್ಟು 210 ಎಕರೆ ಭೂಮಿಯನ್ನು ಸಂಬಂಧಿ​ಸಿದ ಇಲಾಖೆಗಳಿಗೆ ಹಸ್ತಾಂತರಿಸಿದ್ದು ಅದರಲ್ಲಿ ಪ್ರಮುಖವಾಗಿ ಆಸ್ಪತ್ರೆ, ಆಶ್ರಯ ಮನೆಗಳ ನಿರ್ಮಾಣ, ಶಾಲೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದರು.

ತೆರವು ನಿಶ್ಚಿತ:

ಮಲಪ್ರಭಾ ನದಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಾದ ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳ ನದಿ ಪಾತ್ರವು ಅತಿಕ್ರಮಣವಾಗಿರುವುದರಿಂದಲೇ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಅಂದಾಜು 300 ಕಿಮೀ ವ್ಯಾಪ್ತಿಯಲ್ಲಿ ನದಿಯ ವಿಸ್ತಾರದಲ್ಲಿ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ಸಹ ಬಂದಿದೆ. ಬರುವ ದಿನಗಳಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಂಡು ಮಲಪ್ರಭಾ ನದಿಯ ಮೂಲಪಾತ್ರವನ್ನು ಉಳಿಸಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.