ಬೆಂಗಳೂರು(ಡಿ.12): ವಯಸ್ಸಾದ ಗೋವುಗಳನ್ನು ಸಾಕಲು ಸಾಧ್ಯವಾಗದಿದ್ದರೆ ನಮ್ಮ ಮನೆ ಬಾಗಿಲಿಗೆ ತಂದು ಬಿಡಿ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

‘ರೈತರ ಅನುತ್ಪಾದಕ ಜಾನುವಾರುಗಳನ್ನು ಬಿಜೆಪಿ ನಾಯಕರ ಮನೆಗೆ ತೆಗೆದುಕೊಂಡು ಹೋಗಿ ಬಿಡಿ’ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಗಂಡು ಕರು, ಮುದಿ ಹಸುಗಳನ್ನು ಸಾಕಲು ನಾವು ಸಿದ್ಧವಾಗಿದ್ದೇವೆ. ಅದರ ಜತೆಗೆ ಕಾಂಗ್ರೆಸ್‌ ಮುಖಂಡರ ಹಿರಿಯರನ್ನೂ ಬೇಕಾದರೆ ಕಳುಹಿಸಲಿ. ಅವರನ್ನೂ ನಾವೇ ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ವ್ಯಂಗ್ಯವಾಗಿ ಹೇಳಿದರು. ‘ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ಧವಿದೆ. ಮಠ-ಮಂದಿರಗಳಲ್ಲಿ ಗೋ ಶಾಲೆಗಾಗಿ ಸಾವಿರಾರು ಎಕರೆ ನೀಡಲಾಗಿದೆ. ಅದನ್ನು ಬಳಸಿಕೊಳ್ಳುತ್ತೇವೆ’ ಎಂದರು.

ಕೇಂದ್ರ ಸರ್ಕಾರದ ಯೋಜನೆಗಾಗಿ ಗೋಶಾಲೆ ಒಡೆಯಲು ಸಿದ್ಧತೆ; ಬೀದಿಗೆ ಬರಲಿವೆ ನೂರಾರು ಗೋವುಗಳು

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವುದು ನಮ್ಮ ಪ್ರಣಾಳಿಕೆಯಲ್ಲಿಯೇ ಇತ್ತು. ಇದು ನಮಗೆ ರಕ್ತದಲ್ಲಿಯೇ ಬಂದಿದೆ. ಮನುಷ್ಯ ಹುಟ್ಟಿದಾಗಲೂ, ಸತ್ತಾಗಲೂ ಬಾಯಿಗೆ ಹಾಲು ಹಾಕುತ್ತಾರೆ. ಆದರೆ, ಗೋವಿನ ಬಾಯಿಗೆ ಯಾಕೆ ಮಣ್ಣು ಹಾಕುತ್ತೀರಾ? ಗೋಹತ್ಯಾ ನಿಷೇಧ ಕಾಯ್ದೆ ವಿರೋಧಿಸಿ ಯಾಕೆ ನರಕಕ್ಕೆ ಹೋಗುತ್ತೀರಿ?’ ಎಂದು ಅಶೋಕ್‌ ಕಿಡಿಕಾರಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನವರ ಆಟ ಗೊತ್ತಿತ್ತು. ಮಸೂದೆಯನ್ನು ಕೋಲ್ಡ್‌ ಸ್ಟೋರೇಜ್‌ಗೆ ಕಳಿಸುವ ಉದ್ದೇಶ ಕಾಂಗ್ರೆಸ್‌ನದ್ದಾಗಿತ್ತು. ಹೀಗಾಗಿ ನಾವು ಮಸೂದೆ ಮಂಡಿಸಲೇ ಇಲ್ಲ. ಅವರಂತೆ ನಾವು ಸಹ ರಾಜಕೀಯ ಚಾಣಕ್ಯರು. ನಮಗೆ ಗೋಹತ್ಯಾ ನಿಷೇಧ ಜಾರಿ ಮಾಡುವುದು ಗೊತ್ತು. ಕಾಂಗ್ರೆಸ್‌ನಿಂದ ಯಾವುದೇ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ’ ಎಂದರು.