ಚಿಕ್ಕಮಗಳೂರು: ರೋಡ್ ಶೋ ಮೂಲಕ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಚಿವ ಅಶೋಕ್, ಸಿ.ಟಿ.ರವಿ
ಮೂರು ಕಿ.ಮೀ. ಎತ್ತಿನಗಾಡಿಯಲ್ಲಿ ರೋಡ್ ಶೋ, ಹುಲಿಕೆರೆ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ಸಚಿವ ಆರ್. ಅಶೋಕ್ ಹಾಗೂ ಸಿ.ಟಿ.ರವಿ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.05): ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ 16ನೇ ಗ್ರಾಮವಾಸ್ತವ್ಯವನ್ನು ಮಾಡಿದರು. ಲಿಕೆರೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿಯಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಅಡಿಯಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮ ನಡೆಸಲಾಯಿತು. ಜನರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯವನ್ನು ವಿತರಣೆ ಮಾಡಲಾಯಿತು.
ಎತ್ತಿನಗಾಡಿ ಮೆರವಣಿಗೆ
ಗ್ರಾಮವ್ಯಾಸ್ತವ್ಯಕ್ಕೂ ಮೊದಲು ಮೂರು ಕಿ.ಮೀ. ಎತ್ತಿನಗಾಡಿಯಲ್ಲಿ ರೋಡ್ ಶೋ ಮಾಡಲಾಯಿತು.ಪಿಳ್ಳೇನಹಳ್ಳಿಯಿಂದ ಹುಲಿಕೆರೆಯ ವರೆಗೆ ಮೂರು ಕಿ.ಮೀ ಅಲಂಕೃತಗೊಂಡ ಎತ್ತಿನಗಾಡಿ ಮೆರವಣಿಗೆಯಲ್ಲಿ ಕಂದಾಯ ಆರ್.ಅಶೋಕ್ ಅವರನ್ನು ಕರೆತರಲಾಯಿತು. ಗಂಗಬಸವನಹಳ್ಳಿ ಗ್ರಾಮದ ರೈತ ಅಣ್ಣೇಗೌಡ ಎಂಬುವರ ಹಳ್ಳಿಕಾರ್ ಎತ್ತುಗಳನ್ನು ಹೂಡಿದ ಗಾಡಿಯಲ್ಲಿ ಮೆರವಣಿಗೆ ಸಾಗಿಬಂತು. ಶಾಸಕ. ಸಿ.ಟಿ ರವಿ ಅಶೋಕ್ ಗೆ ಸಾಥ್ ನೀಡಿದರು. ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಎತ್ತಿನ ಗಾಡಿಗಳು ಭಾಗಿಯಾಗಿದ್ದವು.
ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೂ ಸ್ಪಂದಿಸುತ್ತಿದ್ದೇನೆ: ಸಚಿವ ಅಶೋಕ್
ಗ್ರಾಮ ದೇವತೆ ಮಾರಮ್ಮನ ದರ್ಶನ, ವಿಶೇಷ ಪೂಜೆ
ಇಳಿ ಸಂಜೆಯಲ್ಲಿ ಹುಲಿಕೆರೆ ಗ್ರಾಮಕ್ಕೆ ಬಂದ ಸಚಿವ ಆರ್.ಅಶೋಕ್ ಗೆ 200ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಗ್ರಾಮದ ಪ್ರವೇಶದ್ವಾರದಿಂದ ಹಿಡಿದು ಗ್ರಾಮ ದೇವತೆ ಮಾರಮ್ಮನ ದೇವಸ್ಥಾನದ ವರೆಗೆ ಬಂದ ಸಚಿವರು ದೇವರ ದರ್ಶನ ಪಡೆದರು. ಈ ವೇಳೆ ಗ್ರಾಮೀಣ ವಾದ್ಯಗೋಷ್ಠಿಗಳು ಮೊಳಗಿದವು.
ಚಿಕ್ಕಮಗಳೂರಲ್ಲಿ ಒಂದೇ ರಾತ್ರಿಗೆ 5 ಹಳ್ಳಿಯಲ್ಲಿ ಕಳ್ಳತನ: 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ
ಜನದ ಕಷ್ಟ ತಿಳಿಯುಲು ಗ್ರಾಮ ವಾಸ್ತವ್ಯ
ಗ್ರಾಮೀಣ ಪ್ರದೇಶದ ಜನರ ಕಷ್ಟ ಏನಂತಾ ಗೊತ್ತಾಗಬೇಕು. ಆಗ ಮಂತ್ರಿಯಾದವರು ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಇದುವರೆಗೂ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ನಾನು 2770 ಗ್ರಾಮ ವಾಸ್ತವ್ಯ ಮಾಡಿದ್ದು, ನಾನೊಬ್ಬನೇ 16ಗ್ರಾಮ ವಾಸ್ತವ್ಯ ಮಾಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಹುಲಿಕೆರೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿಯಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದುವರೆಗಿನ ಗ್ರಾಮ ವಾಸ್ತವ್ಯದಲ್ಲಿ ಅಂದಾಜು ನಾಲ್ಕು ಲಕ್ಷ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ ಖಾತಾ ಬದಲಾವಣೆಯನ್ನು7 ದಿನಕ್ಕೆ ತರಲಾಗಿದೆ. ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ಬರುವಂತೆ ಮಾಡಲಾಗಿದೆ. ತಾಂಡ, ಗೊಲ್ಲರಹಟ್ಟಿಯಲ್ಲಿ ವಾಸಿಸುವ 50ಸಾವಿರ ಕುಟುಂಬಗಳಿಗೆ ಜಮೀನು ರಿಜಿಸ್ಟರ್ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಗ್ರಾಮ ವಾಸ್ತವ್ಯದ ಉದ್ದೇಶ ಜನಸ್ನೇಹಿ ಆಡಳಿತವನ್ನು ನೀಡುವುದಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಯಾವ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಾರೋ ಆ ಗ್ರಾಮದ ಅಭಿವೃದ್ಧಿಗೆ 1ಕೋಟಿ ರೂ. ಕೊಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಇಲ್ಲಿ 5ಸಾವಿರಕ್ಕೂ ಹೆಚ್ಚು ಫಲಾನುಭವಿ ಗಳನ್ನು ಗುರುತಿಸಿ ಸವಲತ್ತುಗಳನ್ನು ನೀಡುತ್ತಿದ್ದಾರೆ ಎಂದರು.ತದನಂತರ ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಚಿವ ಆರ್ ಅಶೋಕ್ ವಾಸ್ತವ್ಯ ಮಾಡಿದರು. ಸಚಿವರಿಗೆ ಸ್ಥಳೀಯ ಶಾಸಕ ಸಿ ಟಿ ರವಿ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸಾಥ್ ನೀಡಿದರು.