ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸ್ತೇವೆ: ಸಚಿವ ಪ್ರಭು ಚವ್ಹಾಣ
50 ಲಕ್ಷ ವೆಚ್ಚದ ರೈತ ಸಂಪರ್ಕ ಕೇಂದ್ರ ಕಾಮಗಾರಿಗೆ ಚಾಲನೆ| ದೂರು ಬರದಂತೆ, ಗುಣಮಟ್ಟದ ಕೆಲಸ ಮಾಡಿ| ತಪ್ಪೆಸಗಿದ್ರೆ ಕ್ರಮ ಗ್ಯಾರಂಟಿ: ಸಚಿವ ಪ್ರಭು ಚವ್ಹಾಣ| ನನ್ನ ಮೇಲಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ, ಜನರೇ ನನ್ನ ದೇವರು | ವಿವಿಧ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಅಧಿಕಾರಿಗಳಿಗೆ ಸಚಿವ ಸೂಚನೆ|
ಕಮಲನಗರ(ಡಿ.22): ಸಾರ್ವಜನಿಕರಿಂದ ದೂರುಗಳು ಬರದಂತೆ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಎಚ್ಚರಿಸಿದ್ದಾರೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಶನಿವಾರ ಆರ್‌ಐಡಿಎಫ್-23ರ ಯೋಜನೆಯಡಿ 50 ಲಕ್ಷ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿ, ನನ್ನ ಕ್ಷೇತ್ರದ ಜನರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಎಂದೂ ಚ್ಯುತಿ ಬಾರದಂತೆ ಕೆಲಸ ಮಾಡುವೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ, ಭೂಸೇನಾ ನಿಗಮದಿಂದ ಕಾರ್ಯ ನಿರ್ವಹಿಸಿದ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರುಗಳು ಬಂದಿವೆ. ತಕ್ಷಣ ಪರಿಹಾರ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇಶದ ಭವಿಷ್ಯ ರೈತರ ಹಿತ ಕಾಪಾಡುವಲ್ಲಿ ಇದೆ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ರಾಜ್ಯದ ವಿವಿಧ ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಕಾಮಗಾರಿಯಲ್ಲಿ ಕಳಪೆ ಕಂಡು ಬಂದಲ್ಲಿ ತಕ್ಷಣ ನನ್ನ ಗಮನಕ್ಕೆ ತರಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಖಂಡ ಪ್ರಕಾಶ ಟೊಣ್ಣೆ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ ಪತ್ರೆ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ್, ಶ್ರೀರಂಗ ಪರಿಹಾರ, ಶಿವಕುಮಾರ ಜುಲ್ಫೆ, ಬಾಲಾಜಿ ತೇಲಂಗ, ಶಾಂತಕುಮಾರ ಬಿರಾದಾರ, ಭೂಸೇನಾ ನಿಗಮದ ಎಇಇ ಜಾಫರ್ ಅಹ್ಮದ್, ಸಹಾಯಕ ಎಂಜಿನಿಯರ್ ಅಭಿಷೇಕ ಪೋಲಾ, ಸಹಾಯಕ ಕೃಷಿ ಅಧಿಕಾರಿ ಸುನೀಲಕುಮಾರ ಬಿರಾದಾರ ಸೇರಿದಂತೆ ಇತರರಿದ್ದರು.
ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಅಳಿಸಲು 85 ರೈತ ಸಂಪರ್ಕ ಕೇಂದ್ರಗಳಿಗೆ ಸರ್ಕಾರದಿಂದ ಅನುದಾನ ಮಂಜೂರು ಆಗಿದ್ದು. ಔರಾದ್ ಹಾಗೂ ಕಮಲನಗರ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜನರೇ ನನ್ನ ಪಾಲಿನ ದೇವರು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಹೇಳಿದ್ದಾರೆ.