ಬೀದರ್: ಮಳೆಗೆ ಹಾಳಾಯ್ತು 2 ಕೋಟಿ ರು. ವೆಚ್ಚದ ಕಾಮಗಾರಿ, ಸಚಿವ ಪ್ರಭು ಚವ್ಹಾಣ
ಮತ್ತೆ ಕೌಠಾ ಸೇತುವೆ ಶಿಥಿಲ| ಎರಡು ವರ್ಷಗಳ ಹಿಂದೆ ನಡೆದಿದ್ದ ಕಾಮಗಾರಿ| ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೇತುವೆಗೆ ಭೇಟಿ, ಪರಿಶೀಲನೆ| ಮತ್ತೆ ರಿಪೇರಿ ಮಾಡಿಸ್ತೇವೆ, ಭಾರಿ ವಾಹನಗಳ ಸಂಚಾರಕ್ಕೆ ತಕ್ಷಣವೇ ಬ್ರೇಕ್|
ಬೀದರ್(ಆ.27): ಜಿಲ್ಲೆಯ ಪ್ರಮುಖ ಸೇತುವೆಗಳಲ್ಲೊಂದಾದ ಕೌಠಾ ಸೇತುವೆಯು ಮತ್ತೆ ಶಿಥಿಲಗೊಂಡಿದ್ದು ಒಂದೆರೆಡು ವರ್ಷಗಳ ಹಿಂದಷ್ಟೇ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮಾಡಲಾಗಿದ್ದ ರಿಪೇರಿ ಮಳೆಯಿಂದಾಗಿ ಹಾಳಾಗಿದ್ದು ಇದೀಗ ಮತ್ತೆ ರಿಪೇರಿಗೆ ಅನುದಾನ ಮಂಜೂರಿಸಲು ಸಿದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಈ ಕುರಿತಂತೆ ಸಚಿವರು ಪ್ರಭು ಚವ್ಹಾಣ ಅವರು ಸ್ಥಳಕ್ಕೆ ಭೇಟಿ ನೀಡಿ, ಕಳೆದ ಎರಡು ವರ್ಷಗಳ ಹಿಂದೆಯೂ ಸೇತುವೆ ಶಿಥಿಲಗೊಂಡಿದೆ ಎಂದು 2 ಕೋಟಿ ರು.ಗಳ ವೆಚ್ಚದಲ್ಲಿ ರಿಪೇರಿ ಮಾಡಲಾಗಿತ್ತು, ಹೆಚ್ಚು ಮಳೆಯಾಗಿದ್ದರಿಂದ ಇದೀಗ ಮತ್ತೇ ಶಿಥಿಲವಾಗಿದೆ ಎಂದು ಗೊತ್ತಾಗಿದೆ ಇದರ ರಿಪೇರಿಗೆ ಮತ್ತೇ ಅನುದಾನ ತರುತ್ತೇನೆ ರಿಪೇರಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಇನ್ನು ಈ ಸೇತುವೆಯ ರಸ್ತೆಯನ್ನು ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದಿಂದ ಬೀದರ್ ಔರಾದ್ ರಾಷ್ಟ್ರೀಯ ಹೆದ್ದಾರಿಯ ಟೆಂಡರ್ ಕರೆಯಲಾಗಿದ್ದು 306ಕೋಟಿ ರು.ಗಳ ರಸ್ತೆ ಕಾಮಗಾರಿ ನಡೆಯಲಿದ್ದು ಆಗಲೂ ಈ ಸೇತುವೆಯ ದುರಸ್ಥಿ ಕಾರ್ಯ ನಡೆಯುತ್ತದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭಗೊಳ್ಳುವ ವಿಶ್ವಾಸ ತಮಗಿದೆ ಎಂದು ಹೇಳಿದರು.
ಬೀದರ್: ಡಿಸಿ ಕಚೇರಿ ಮುಂದೆ ಸತ್ತ ಹಾವು ಇಟ್ಟು ಪ್ರತಿಭಟನೆ
ತಾವೂ ಕೂಡ ಇದೇ ರಸ್ತೆ ಮೇಲೆ ಸ್ವಗ್ರಾಮಕ್ಕೆ ನಿತ್ಯ ತೆರಳುತ್ತೇನೆ ಸಾಕಷ್ಟುದುರಾವಸ್ಥೆಯಲ್ಲಿದೆ ಈ ರಸ್ತೆ. ಇದರ ಮೇಲೆ ಓಡಾಡುವ ಪ್ರಯಾಣಿಕರ, ವಾಹನ ಸವಾರರ ಬಗ್ಗೆ ಕಾಳಜಿ ಇದೆ. ಶೀಘ್ರದಲ್ಲಿ ಇದರ ರಿಪೇರಿಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸೇತುವೆ 50 ವರ್ಷದ ಹಿಂದೆ ನಿರ್ಮಾಣಗೊಂಡಿದ್ದು ಪದೇ ಪದೇ ರಿಪೇರಿಗೆ ಬರುತ್ತಿದೆ. ಎರಡು ವರ್ಷಗಳ ಹಿಂದೆ ಎರಡು ಕೋಟಿ ರು.ಗಳ ವೆಚ್ಚದಲ್ಲಿ ರಿಪೇರಿ ಮಾಡಿದ್ದು ತಾತ್ಕಾಲಿಕ, ಮಜಬೂತ್ ಕೆಲಸ ಅಲ್ಲ ಎಂದು ಹೇಳುವ ಮೂಲಕ ರಿಪೇರಿ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇನ್ನು ಸಧ್ಯ ಈ ಸೇತುವೆ ಮೇಲಿಂದ ಸಾರ್ವಜನಿಕ ದ್ವಿಚಕ್ರ, ಲಘು ವಾಹನಗಳು ಓಡಾಡುವದಕ್ಕೆ ಯಾವುದೇ ಅಡ್ಡಿಯಿಲ್ಲ ಆದರೆ ಭಾರಿ ವಾಹನಗಳಾದ ಮರಳು ವಾಹನಗಳು, ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತದೆ ಇದಕ್ಕಾಗಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ, ಬೀದರ್ ಸಹಾಯಕ ಆಯುಕ್ತರು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಬೀದರ್ ಉಪ ವಿಭಾಗದ ಡಿವೈಎಸ್ಪಿ ಬಸವೇಶ್ವರ ಹೀರಾ, ಸಂತಪುರ ಪೊಲೀಸ್ ಸಬ್‌ಇನ್ಸಪೆಕ್ಟರ್ ಸುವರ್ಣ ಹಾಗೂ ಇತರರು ಇದ್ದರು.