ಬೆಂಗಳೂರು(ಮೇ.08): ಕೋವಿಡ್‌ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾದ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ಸದ್ಯದಲ್ಲೇ ವಿಶೇಷ ಪ್ಯಾಕೇಜ್‌ ಪ್ರಕಟಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ. 
ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ನೀಡಿದ್ದಾರೆ. ಹಾಗೆಯೇ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ಪ್ಯಾಕೇಜ್‌ ಪ್ರಕಟವಾಗಲಿದೆ ಎಂದರು.

ಕಳಪೆ ಬೀಜ: 8 ಕ್ರಿಮಿನಲ್‌ ಕೇಸ್‌

ಕಳಪೆ ಬಿತ್ತನೆ ಬೀಜದ ಮಾಫಿಯಾದ ಆಂಧ್ರ ಮೂಲವನ್ನು ಪತ್ತೆ ಮಾಡಲಾಗಿದೆ. ಆಂಧ್ರದಲ್ಲಿ ತಿರಸ್ಕೃತಗೊಂಡಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳು ಸೇರಿದಂತೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್‌ ಕಳಪೆ ಬೀಜ ವಶಕ್ಕೆ ಪಡೆದು ಎಂಟು ಕ್ರಿಮಿನಲ್‌ ಕೇಸ್‌ ದಾಖಲು ಮಾಡಲಾಗಿದೆ ಎಂದು ಬಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

'ಉತ್ತರ ಭಾರತದಲ್ಲಿ ಸಿಲುಕಿದ ಕನ್ನಡಿಗರನ್ನ ಕರೆತರಲು ವಿಶೇಷ ರೈಲು'

ಕೇಂದ್ರದ ಮಟ್ಟದಲ್ಲಿಯೂ ನಮ್ಮ ರಾಜ್ಯದ ಅಗ್ರೀವಾರ್‌ ರೂಮ್‌ಗೆ ಒಳ್ಳೆಯ ಹೆಸರು ಬಂದಿದ್ದು, ಕೇಂದ್ರದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ರಾಯಚೂರು, ಕೊಪ್ಪಳ ಭಾಗದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾಗಿದ್ದ ಭತ್ತದ ಬೆಳೆಗೆ ವರದಿ ಕೊಟ್ಟ ಮೂರೇ ದಿನದಲ್ಲಿ ಮುಖ್ಯಮಂತ್ರಿಗಳು 45 ಕೋಟಿ ಪರಿಹಾರ ಘೋಷಿಸಿದ್ದರು. ಮುಂದಿನ ದಿನಗಳಲ್ಲಿ ಸರ್ಕಾರ ರೈತರಿಗೆ ಇನ್ನಷ್ಟುಪರಿಹಾರ ನೀಡಲಿದೆ ಎಂದು ಭರವಸೆ ನೀಡಿದರು.