ಕೊಡಗು: ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ, ಸಚಿವ ಭೋಸರಾಜು
ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ಇದೆ ಎಂದು ಕೇಳಿ ಬರಬಾರದು. ಹಾಗೆಯೇ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಎನ್.ಎಸ್.ಭೋಸರಾಜು
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್,
ಕೊಡಗು(ಜ.02): ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ಇದೆ ಎಂದು ಕೇಳಿ ಬರಬಾರದು. ಹಾಗೆಯೇ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕರ ಸೇವಕರ ಬಂಧನಕ್ಕೂ ರಾಮಮಂದಿರ ಉದ್ಘಾಟನೆಗೂ ಯಾವುದೇ ಸಂಬಂಧ ಇಲ್ಲ: ಸಚಿವ ಭೋಸರಾಜ್ ತಿರುಗೇಟು
ಬರ ನಿರ್ವಹಣೆಯಲ್ಲಿ ಉದಾಸೀನ ಮಾಡಬಾರದು. ಪಂಚಾಯತ್ ರಾಜ್ ಎಂಜಿನಿಯರ್ ಗಳು, ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಡಿಒಗಳು ಕುಡಿಯುವ ನೀರು ಪೂರೈಕೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಸಿದರು.
ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂಡಾಮೇಸ್ತ್ರಿ ಯೋಜನೆ ಸಂಬಂಧಿಸಿದಂತೆ ಇನ್ನೂ ಹಸ್ತಾಂತರವಾಗದಿರುವುದು, ಹಾಗೆಯೇ ಮೋಟಾರು ಅಳವಡಿಸುವ ಕಾಮಗಾರಿ ಸಂಬಂಧಿಸಿದಂತೆ 6 ತಿಂಗಳಾದರೂ ಟೆಂಡರ್ ಆಹ್ವಾನಿಸದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಮಡಿಕೇರಿ ನಗರಸಭೆ ಆಯುಕ್ತ ವಿಜಯ್ ವಿರುದ್ಧ ನೀವು ಆಯುಕ್ತರಾಗುವುದಕ್ಕೆ ಯೋಗ್ಯರಲ್ಲ ಎಂದು ಸಿಡಿಮಿಡಿಗೊಂಡರು.
ಕುಂಡಾಮೇಸ್ತ್ರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರಾದ ಡಾ.ಮಂತರ್ ಗೌಡ ಅವರು ವಿಷಯ ಪ್ರಸ್ತಾಪಿಸಿದರು. ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸೂಚಿಸಿದರು. ಕುಡಿಯುವ ನೀರು ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಗಮನಸೆಳೆದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು. ಜಿಲ್ಲೆಯ ಗಡಿ ಭಾಗದಲ್ಲಿ ಕೋವಿಡ್ ತಪಾಸಣೆ ಮಾಡಬೇಕು. ಕೋವಿಡ್ ಕಂಡುಬಂದಲ್ಲಿ ಸರ್ಕಾರದ ನಿಯಮದಂತೆ ಹೆಚ್ಚಿನ ಗಮನಹರಿಸಬೇಕು. ಔಷಧಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕೋವಿಡ್ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸಲಾಗಿದ್ದು, ಗಡಿ ಪ್ರದೇಶದ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು. ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿದಂತೆ ಕಾಲ ಕಾಲಕ್ಕೆ ವೈದ್ಯರ ನೇಮಕಾತಿ ಆಹ್ವಾನಿಸಲಾಗುತ್ತಿದೆ. ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ನೇಮಕಾತಿ ಸಂಬಂಧ ವಿಷಯ ಪ್ರಸ್ತಾಪಿಸಲಾಗಿದ್ದು, ವಿಶೇಷ ಆದ್ಯತೆ ಮೇಲೆ ಕೊಡಗು ಜಿಲ್ಲೆಗೆ ವೈದ್ಯರನ್ನು ನಿಯೋಜಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಪಡೆದರು. ಈ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸೋಮಸುಂದರ ಅವರು ಬೆಳೆಹಾನಿ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು, 9 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 834 ಲಕ್ಷ ರೂ ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ನಗರದಲ್ಲಿ ನಿರ್ಮಾಣವಾಗುತ್ತಿರುವ ‘ಸುವರ್ಣ ಕರ್ನಾಟಕ ಸಮುಚ್ಚಯ ಭವನ’ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಶಾಸಕರಾದ ಡಾ. ಮಂತರ್ ಗೌಡ ಅವರು 9 ವರ್ಷ ಆದರೂ ಸಹ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸಿಟ್ಟು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಅವರು ಕಾಮಗಾರಿ ಪ್ರಗತಿಯಲ್ಲಿದ್ದು, ಕಟ್ಟಡದ ಒಳಭಾಗದಲ್ಲಿ ಕೆಲಸಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಪರಿಹರಿಸಲಾಗುವುದು. ಈ ರೀತಿ ಹಣ ಇದ್ದರೂ ಸಹ ಕಾಮಗಾರಿ ಕೈಗೊಳ್ಳದೆ ದಿನದೂಡುತ್ತಿರುವುದು ಏಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು. ‘ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಈಗಾಗಲೇ ಮೊದಲ ಕಂತಿನಲ್ಲಿ 3 ಕೋಟಿ ರೂ, ಎರಡನೇ ಕಂತಿನಲ್ಲಿ 2.50 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ರೂ. ಅನುದಾನ ಇದ್ದು, ಕಾಮಗಾರಿ ಪ್ರಗತಿ ಸಾಧಿಸಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು.
ಭಾಗಮಂಡಲ ಮೇಲುಸೇತುವೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭಾಗಮಂಡಲ ಮೇಲುಸೇತುವೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ನೀರಾವರಿ ಸಚಿವರ ಗಮನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಸುವರ್ಣ ಕರ್ನಾಟಕ ಸಮುಚ್ಚಯ ಭವನ, ಭಾಗಮಂಡಲ ಮೇಲುಸೇತುವೆ, ಕೊಡವ ಹೆರಿಟೇಜ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ಸೂಚಿಸಿದರು. ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು. ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸಗಳನ್ನು ಪರಿಹರಿಸಲಾಗುವುದು, ಅನುದಾನ ಬೇಕಿದ್ದಲ್ಲಿ ಬಿಡುಗಡೆಗೆ ಕ್ರಮವಹಿಸಲಾಗುವುದು, ಆದ್ದರಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರು ನಿರ್ದೇಶನ ನೀಡಿದರು.
‘ಮಂಗಳೂರು ರಸ್ತೆಯ ತಡೆಗೋಡೆ ಸಂಬಂಧಿಸಿದಂತೆ ಸಚಿವರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ. ಮಂತರ್ ಗೌಡ ಅವರು ಹೊಸ ಟಾರ್ಪಲ್ ಅಳವಡಿಸುವುದನ್ನು ಹೊರತುಪಡಿಸಿದರೆ ಬೇರಾವ ಕೆಲಸ ಆಗಿಲ್ಲ ಎಂದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಹಾಡಿ ಜನರಿಗೆ ಅರಣ್ಯ ಹಕ್ಕು ಪತ್ರ ವಿತರಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಒದಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಮಧು ಚೆಕ್ ಬೌನ್ಸ್ ಪ್ರಕರಣ ಮರೆಸಲು ತಮ್ಮನ ಅರೆಸ್ಟ್: ಸಂಸದ ಪ್ರತಾಪ್ ಸಿಂಹ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯೋಣ ಎಂದು ಹೇಳಿದರು. ಕಾಡಾನೆ ಹಾವಳಿಗಳನ್ನು ನಿಯಂತ್ರಿಸುವಂತೆ ಶಾಸಕರು ಹೇಳಿದರು. ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು ಅರ್ಹರೆಲ್ಲರಿಗೂ ಗೃಹಜ್ಯೋತಿ ಯೋಜನೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಮುಖ್ಯ ಯೋಜನಾಧಿಕಾರಿ ಝೀವಲ್ ಖಾನ್ ಇತರರು ಇದ್ದರು.