ಜನರ ಸಮಸ್ಯೆ ಆಲಿಸದ ಸಚಿವರು : ಆದರೆ ಜನರ ಹಣವೇ ಖರ್ಚಿಗೆ

ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಸರ್ಕಾರದ ಅನುದಾನದಲ್ಲಿ ಕೇವಲ ಮೇಳಗಳನ್ನು ಆಯೋಜಿಸಿ ಕೆ.ಸಿ.ನಾರಾಯಣಗೌಡರು ಮೇಳಗಳ ಸಚಿವರಾಗಿದ್ದಾರೆ ಎಂದು ತಾಲೂಕು ಜೆಡಿಎಸ್‌ ಮುಖಂಡರು ಬುಧವಾರ ಟೀಕಿಸಿದರು.

Minister Narayana Gowda neglects Constituency snr

 ಕೆ.ಆರ್‌.ಪೇಟೆ(ಅ.21):  ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಸರ್ಕಾರದ ಅನುದಾನದಲ್ಲಿ ಕೇವಲ ಮೇಳಗಳನ್ನು ಆಯೋಜಿಸಿ ಕೆ.ಸಿ.ನಾರಾಯಣಗೌಡರು ಮೇಳಗಳ ಸಚಿವರಾಗಿದ್ದಾರೆ ಎಂದು ತಾಲೂಕು ಜೆಡಿಎಸ್‌ ಮುಖಂಡರು ಬುಧವಾರ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಜೆಡಿಎಸ್‌ (JDS)  ಅಧ್ಯಕ್ಷ ಎ.ಎನ್‌.ಜಾನಕೀರಾಂ, ತಾಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ. ಜನರ ಕೆಲಸಗಳು ಆಗುತ್ತಿಲ್ಲ. ಮಳೆಯಿಂದಾಗಿ ಕೆರೆ, ಕಟ್ಟೆಗಳು ಒಡೆದು ರಸ್ತೆಗಳು (Road)  ಕೊಚ್ಚಿ ಹೋಗಿವೆ. ರೈತರ (Farmers) ಬೆಳೆ ನಷ್ಟವಾಗಿದೆ. ನೂರಾರು ಮನೆಗಳು ಕುಸಿದಿವೆ. ಆದರೆ, ಸಚಿವರು ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಮೇಳಗಳನ್ನು ಆಯೋಜಿಸಿ ಅನುದಾನವನ್ನು ನೀರಿನಲ್ಲಿ ಹೋಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಈಗಾಗಲೇ ಆರೋಗ್ಯ ಮೇಳ, ಉದ್ಯೋಗ ಮೇಳ, ಕನ್ನಡಕ ಮೇಳ, ಹುಟ್ಟುಹಬ್ಬದ ಮೇಳ, ಇದೀಗ ಕುಂಭಮೇಳ- ಹೀಗೆ ಒಂದರ ಹಿಂದೆ ಒಂದರಂತೆ ಬರೀ ಮೇಳ ಆಚರಿಸಲಾಗುತ್ತಿದೆ. ಒಂದರ ಹಿಂದೆ ಒಂದರಂತೆ ಮೇಳಗಳನ್ನು ಸಂಘಟಿಸುತ್ತಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಶಿಕ್ಷಕರನ್ನು ಈ ಮೇಳಗಳಿಗೆ ಬಳಕೆ ಮಾಡುತ್ತಿರುವುದರಿಂದ ತಾಲೂಕಿನ ಯಾವುದೇ ಕಚೇರಿಗಳಲ್ಲಿಯೂ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರಿಗೆ ಲಭ್ಯವಾಗದೆ ಸಂಕಷ್ಟಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಮೇಳಕ್ಕೆ ತಂದ ಅನುದಾನವನ್ನೇ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿದ್ದರೆ ಜನರ ಬವಣೆಗಳನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸಬಹುದಾಗಿತ್ತು. ನಾರಾಯಣಗೌಡರು ಮೇಳದ ಸಚಿವರಾಗುವ ಬದಲು ಜನಪರ ಸಚಿವರಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕುಂಭಮೇಳಕ್ಕೆ ಬಲವಂತದಿಂದ ಹಣ ವಸೂಲಿ:

ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಜರುಗಿದ ಮಹಾ ಕುಂಭಮೇಳಕ್ಕೆ ರಾಜ್ಯ ಸರ್ಕಾರ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಜಿಲ್ಲೆಯ ಉದ್ಯಮಿಗಳು ಮತ್ತು ವರ್ತಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ. ಕುಂಭಮೇಳಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ ಮತ್ತು ಸಾರ್ವಜನಿಕರಿಂದ ವಸೂಲಿ ಮಾಡಿದ ಹಣದ ವಿವರ ಮತ್ತು ಅದರ ಬಳಕೆ ಕುರಿತ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ನೀಡುವಂತೆ ಆಗ್ರಹಿಸಿದರು.

ಕುಂಭಮೇಳಕ್ಕೆ ಕೇವಲ ಸರ್ಕಾರದ ಅನುದಾನವನ್ನು ಮಾತ್ರ ಬಳಕೆ ಮಾಡಿದ್ದರೆ ಜಿಲ್ಲಾಧಿಕಾರಿಗಳು ಅದರ ಲೆಕ್ಕಪತ್ರವನ್ನು ರಾಜ್ಯ ಸರ್ಕಾರಕ್ಕೆ ನೀಡಬಹುದಾಗಿತ್ತು. ಆದರೆ, ಕುಂಭಮೇಳದ ಹೆಸರಿನಲ್ಲಿ ಸಾರ್ವಜನಿಕ ವಲಯದಿಂದ ಬಲವಂತವಾಗಿ ವಸೂಲಾತಿ ನಡೆದಿದೆ ಎಂದರು.

ಪೊಲೀಸ್‌ ಇಲಾಖೆ ವಸೂಲಾತಿಯ ಬಗ್ಗೆ ಪಾಂಡವಪುರ ಉಪ ವಿಭಾಗಧಿಕಾರಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರು ನೀಡಿದ ಹಣದ ಲೆಕ್ಕಪತ್ರವನ್ನು ಕೇಳುವ ಹಕ್ಕು ಸಾರ್ವಜನಿಕರಿಗಿದೆ. ಕುಂಭಮೇಳವನ್ನು ಜಿಲ್ಲಾಡಳಿತ ಬಿಜೆಪಿ ಮೇಳವನ್ನಾಗಿ ಪರಿವರ್ತಿಸಿದೆ ಎಂದು ಟೀಕಿಸಿದರು.

ಕುಂಭಮೇಳವನ್ನು ಆಚರಿಸುವ ಮುನ್ನ ಜಿಲ್ಲಾಡಳಿತ ಸ್ಥಳೀಯ ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಾಲೂಕಿನ ವಿರೋಧ ಪಕ್ಷದ ಮುಖಂಡರನ್ನು ಯಾವುದೇ ಪೂರ್ವಭಾವಿ ಸಭೆಗೆ ಆಹ್ವಾನಿಸಿಲ್ಲ. ಕುಂಭಮೇಳ ನಡೆದ ಅಂಬಿಗರಹಳ್ಳಿ, ಪುರ ಮತ್ತು ಸಂಗಾಪುರ ಗ್ರಾಮದ ಜನರನ್ನೂ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಜಿಲ್ಲಾಡಳಿತ ಮಾಡದೇ ಸಚಿವ ಕೆ.ಸಿ.ನಾರಾಯಣಗೌಡರ ಏಜೆಂಟರಂತೆ ಕೆಲಸ ಮಾಡಿದೆ ಎಂದು ದೂರಿದರು.

ಬಿಸಿನೆಸ್‌ ಮಾಡಲು ಬಂದಿದ್ದಾರೆ:

ಎಪಿಎಂಸಿ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರಾಮಚಂದ್ರನ್‌ ಮಾತನಾಡಿ, ಕೆ.ಸಿ.ನಾರಾಯಣಗೌಡರು ಶಾಸಕರಾಗಿ ಜನಸೇವೆ ಮಾಡುವ ಬದಲು ಬಿಸಿನೆಸ್‌ ಮಾಡಲು ಕ್ಷೇತ್ರಕ್ಕೆ ಬಂದಿದ್ದಾರೆ. ಶಾಸಕರಾಗಿ ಆಯ್ಕೆಯಾಗುವ ಮುನ್ನ ತಾಲೂಕಿನುದ್ದಕ್ಕೂ ಶಾಲಾ ಕಾಲೇಜು ಮಕ್ಕಳಿಗೆ ನೋಚ್‌ ಪುಸ್ತಕ, ಪೆನ್ನು, ಹಾಸ್ಟಲ… ವಿದ್ಯಾರ್ಥಿಗಳಿಗೆ ತಟ್ಟೆಲೋಟ, ನಿರುದ್ಯೋಗಿ ಮಹಿಳೆಯರಿಗೆ ಟೈಲರಿಂಗ… ತರಬೇತಿ ಮತ್ತಿತರ ಸೇವಾ ಕಾರ್ಯಗಳ ಮೂಲಕ ಸಮಾಜ ಸೇವಕರಂತೆ ಬಿಂಬಿಸಿಕೊಂಡರು.

ಶಾಸಕರಾದ ನಂತರ ತಮ್ಮ ಎಲ್ಲಾ ಸಮಾಜ ಸೇವಾ ಕಾರ್ಯಗಳನ್ನು ಸ್ಥಗಿತಗೊಳಿಸಿದರು. ಈಗ ರಾಜಕೀಯವನ್ನು ಬಿಸಿನೆಸ್‌ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಗದ್ದೆಹೊಸೂರು ಅಶ್ವಿನ್‌, ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಮುಖಂಡರಾದ ಮಾಂಬಳ್ಳಿ ಅಶæೂೕಕ್‌, ಪೂವನಹಳ್ಳಿ ರೇವಣ್ಣ, ಬೆಳತೂರು ಪುಟ್ಟೇಗೌಡ, ಸೋಮೇಗೌಡ, ರವಿಕುಮಾರ್‌, ಬಸವಲಿಂಗಪ್ಪ, ಬೂಕನಕೆರೆ ಮಂಜು, ಈರೇಗೌಡ ಇದ್ದರು.

Latest Videos
Follow Us:
Download App:
  • android
  • ios