ಕಳಪೆ ಬೀಜ, ಗೊಬ್ಬರ ವಿರುದ್ಧ ಎಚ್ಚರ: ಸಚಿವ ಚಲುವರಾಯಸ್ವಾಮಿ
15 ದಿನದಲ್ಲಿ ಕೃಷಿ ಕಾರ್ಯಕ್ರಮಗಳ ಮಾರ್ಗಸೂಚಿ ಬಿಡುಗಡೆಗೆ ಕ್ರಮ, ಅಧಿಕಾರಿಗಳು ಕಚೇರಿ ಬಿಟ್ಟು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಲಹೆ, ಜಿಪಂನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೃಷಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ, ಕೃಷಿ ಅಧಿಕಾರಿಗಳು ಕಾಲಕಾಲಕ್ಕೆ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು: ಸಚಿವ ಎನ್.ಚೆಲುವರಾಯಸ್ವಾಮಿ
ಶಿವಮೊಗ್ಗ(ಜು.22): ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಾದರೂ ಈಗ ಮಳೆ ಚೇತರಿಕೆಯಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕಳಪೆ ಬೀಜ, ಗೊಬ್ಬರ ಮಾರಾಟವಾಗದಂತೆ ಎಚ್ಚರಿಸಿಕೊಳ್ಳಬೇಕು. ಒಂದುವೇಳೆ ಅಂತಹ ಪ್ರಕರಣಗಳು ಕಂಡುಬಂದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ ಕೃಷಿ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಪಕ್ಷ: ಸಚಿವ ಮಧು ಬಂಗಾರಪ್ಪ
ಸರ್ಕಾರಿ ಅಧಿಕಾರಿಗಳು ಇಷ್ಟೇ ನಮ್ಮ ವ್ಯಾಪ್ತಿ ಎಂದು ಮಿತಿಯೊಳಗೆ ಕೆಲಸ ಮಾಡದೇ ಜನರ ಎಲ್ಲಾ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ಬೇರೆ ಇಲಾಖೆ ಸಮಸ್ಯೆಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗೆ ಆ ಸಮಸ್ಯೆಯನ್ನು ತಿಳಿಸಲು ಅನುಕೂಲವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಏನು ಎಂಬುದನ್ನು ಜನರಿಗೆ ತಿಳಿಸುವಂತೆ ಕೆಲಸ ಅಧಿಕಾರಿಗಳಿಂದ ಆಗಬೇಕು. ಅಧಿಕಾರಿಗಳು ಕಚೇರಿ ಬಿಟ್ಟು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ಆಗ ಅವರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಬೆಳೆವಿಮೆಗೆ ಸಹಕರಿಸಿ:
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜೊತೆಗೆ ರೈತರಿಗೆ .5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡಲು ತೀರ್ಮಾನಿಸಿದೆ. ಮುಂದಿನ 15 ದಿನಗಳೊಳಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುವುದು. ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅರ್ಹರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಲು ಸೂಕ್ತ ಸಲಹೆ-ಸಹಕಾರ ನೀಡಬೇಕು. ಯಾವುದೇ ದೂರುಗಳು ಬಾರದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮುಂಗಾರು ಮಳೆಯಲ್ಲಿ ಕೊರತೆ ಕಂಡುಬಂದಿದೆ. ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಮಳೆ ಆಶಾದಾಯಕವಾಗಿದೆ. ಕೃಷಿ ಅಧಿಕಾರಿಗಳು ಕಾಲಕಾಲಕ್ಕೆ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಅಲ್ಲದೇ, ಗ್ರಾಮೀಣ ಕ್ಷೇತ್ರ ಭೇಟಿಗೆ ತೆರಳಿದಾಗ ಅಲ್ಲಿನ ಕೃಷಿಕರ ಸಮಸ್ಯೆಗಳಿಗೆ ಕಿವಿಯಾಗಬೇಕು. ಅದಕ್ಕೆ ಪೂರಕವಾಗಿ ಸೂಕ್ತ ಹಾಗೂ ಸಕಾಲಿಕ ಮಾರ್ಗದರ್ಶನ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ರೈತರಿಗೆ ಕೃಷಿ ಉಪಕರಣಗಳ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗದಂತೆ ಗಮನಿಸಬೇಕು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ. ದೂರುಗಳು ಬಾರದಂತೆ ಹಾಗೂ ಸರಿಯಾಗಿ ಕೃಷಿ ಉಪಕರಣಗಳ ನಿರ್ವಹಣೆ ಮಾಡುವವರನ್ನು ನಿಯೋಜಿಸಲು ಕ್ರಮ ವಹಿಸುವಂತೆ ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಯೋಜನೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರ, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ 6 ಜಿಲ್ಲೆಗಳ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೃಷಿ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.
ಮಲೆನಾಡಿಗೂ ಬಂದ್ಳು ಕೃತಕ ಸುಂದರಿ; ಸಹ್ಯಾದ್ರಿ ಟಿವಿ ಚಾನೆಲ್‌ಗೂ ಎಐ ನಿರೂಪಕಿ!
‘ಎಲೆಚುಕ್ಕಿ ರೋಗ ತಡೆಗೆ ವಿಜ್ಞಾನಿಗಳಿಗೆ ಸೂಚನೆ’
ಕಳೆದ ಸಾಲಿನಲ್ಲಿ ಅಡಕೆ ಬೆಳೆಗೆ ಕಂಡುಬಂದಿದ್ದ ಎಲೆಚುಕ್ಕೆ ರೋಗದ ನಿಯಂತ್ರಿಸುವ ಸಲುವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅದರ ನಿಯಂತ್ರಣ ಕ್ರಮ ಕೈಗೊಳ್ಳಲು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಸಂದರ್ಭದಲ್ಲಿ 5 ಕೋಟಿ ಸಸಿಗಳನ್ನು ನೆಟ್ಟು ಪರಿಸರ ಸಮತೋಲನ ಕಾಯ್ದುಕೊಳ್ಳಲು ಉದ್ದೇಶಿಸಲಾಗಿದೆ. ಇಲಾಖೆ ಅಧಿಕಾರಿಗಳು ರೈತರ ಹೊಲಗಳ ಬದುಗಳಲ್ಲಿ, ಲಭ್ಯವಿರುವ ಜಮೀನುಗಳಲ್ಲಿ ಹಾಗೂ ಶಾಲಾ- ಕಾಲೇಜು, ಗ್ರಾಮ ಪಂಚಾಯಿತಿ ಮತ್ತಿತರ ಸ್ಥಳಗಳಲ್ಲಿ ಸಸಿಗಳ ನೆಟ್ಟು ಪೋಷಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.