ಬೆಳಗಾವಿಯಲ್ಲಿ ಬಿಜೆಪಿಗನಿಗೆ ಇರಿತ: ಸಚಿವೆ ಹೆಬ್ಬಾಳಕರ ಸಹೋದರ, ಬೆಂಬಲಿಗರಿಂದ ಹಲ್ಲೆ
ಬೆಳಗಾವಿಯ ಜಯನಗರದ ಪೃಥ್ವಿಸಿಂಗ್ ಅವರ ಮನೆ ಮುಂದೆ ಸೋಮವಾರ ಸಂಜೆ ಚನ್ನರಾಜ ಹಟ್ಟಿಹೊಳಿ ಅವರ ಐದಾರು ಜನ ಬೆಂಬಲಿಗರ ಗುಂಪು ಏಕಾಏಕಿ ಬಂದು ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಎಂದೇ ಹೇಳಲಾಗುತ್ತಿರುವ ಪೃಥ್ವಿಸಿಂಗ್ ಜತೆಗೆ ಚನ್ನರಾಜ್ ಅವರ ಆಪ್ತರು ಮಾತನಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ಪೃಥ್ವಿಸಿಂಗ್ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ(ಡಿ.05): ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರಿಂದ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವೆ ಹೆಬ್ಬಾಳಕರ ಹಾಗೂ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು, ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ ಎಂದಿದ್ದಾರೆ.
ಇಲ್ಲಿನ ಜಯನಗರದ ಪೃಥ್ವಿಸಿಂಗ್ ಅವರ ಮನೆ ಮುಂದೆ ಸೋಮವಾರ ಸಂಜೆ ಚನ್ನರಾಜ ಹಟ್ಟಿಹೊಳಿ ಅವರ ಐದಾರು ಜನ ಬೆಂಬಲಿಗರ ಗುಂಪು ಏಕಾಏಕಿ ಬಂದು ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಎಂದೇ ಹೇಳಲಾಗುತ್ತಿರುವ ಪೃಥ್ವಿಸಿಂಗ್ ಜತೆಗೆ ಚನ್ನರಾಜ್ ಅವರ ಆಪ್ತರು ಮಾತನಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ಪೃಥ್ವಿಸಿಂಗ್ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು: ಯತ್ನಾಳ್ ಬಾಂಬ್
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗಾಯಾಳು ಪೃಥ್ವಿಸಿಂಗ್ ಪುತ್ರ ಜಸ್ವೀರ್‌ಸಿಂಗ್, ಸಂಜೆ 4.50 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಪ್ತ ಸಹಾಯಕ ಮತ್ತು ಅಂಗ ರಕ್ಷಕರು ಹೊರಗೆ ಕರೆದುಕೊಂಡು ಬಂದರು. ಆಗ ಫೋನ್ ಮಾಡಿ ಚನ್ನರಾಜ ಅವರು ಬೈಯುತ್ತಿದ್ದರು. ಹೊರಗೆ ಬಾ ಎಂದು ಧಮ್ಕಿ ಹಾಕಿದರು. ಹೊರಗೆ ಬರುತ್ತಿದ್ದಂತೆ ಐದಾರು ಜನರು ಕೂಡಿಕೊಂಡು ಕಟರ್ (ಚಾಕು) ನಿಂದ ಕೈ, ಹೊಟ್ಟೆ, ಬೆನ್ನಿಗೆ ಇರಿದು ಹಲ್ಲೆ ಮಾಡಿದ್ದಾರೆ. ರಕ್ತ ಬರುತ್ತಿತ್ತು. ಅಲ್ಲದೇ ಪ್ರಜ್ಞೆ ತಪ್ಪಿದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಸ್ಥಿತಿ ಹೇಗಿದೆ ಎಂಬುವುದು ಹಾಗೂ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ತಂದೆಯವರೇ ಹೇಳಬೇಕು ಎಂದರು.
ಇನ್ನು ಗಾಯಾಳು ಪೃಥ್ವಿಸಿಂಗ್ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಮನೆಗೆ ಬಂದ ಚನ್ನರಾಜ ಹಟ್ಟಿಹೊಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಎಂ.ಬಿ.ಜೀರಲಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದರು.
ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್ ಹಾಕಿದ್ದು ಸೆರೆಯಾಗಿದೆ. ಈ ಕುರಿತು ಅವರ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯ ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದು ಪತ್ತೆ ಹಚ್ಚಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.
ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ ಪ್ರಕರಣ ಏನೇ ಇದ್ದರು ನಮ್ಮ ಪೊಲೀಸರು ನೋಡಿಕೊಳ್ಳುತ್ತಾರೆ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ತಕ್ಷಣವೇ ಚನ್ನರಾಜ್ ಸೇರಿ ಎಲ್ಲರನ್ನು ಬಂಧಿಸಿ: ವಿಜಯೇಂದ್ರ
ಬೆಳಗಾವಿ: ಪೃಥ್ವಿಸಿಂಗ್ ನಮ್ಮ ರಾಜ್ಯ ಕಾರ್ಯಕಾರಣಿಯ ಸದಸ್ಯ, ಎಸ್ ಸಿ ಮೋರ್ಚಾ ಸದಸ್ಯರಾಗಿದ್ದು, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಅವರ ಗನ್ ಮ್ಯಾನ್ ಸದ್ಧಾಂ, ಪಿಎ ಸುಜಯ್ ಜಾಧವ್ ಸೇರಿ ಹಲ್ಲೆ ನಡೆಸಿದ್ದು, ತಕ್ಷಣವೇ ತಡ ಮಾಡದೇ ಕೇಸ್ ದಾಖಲಿಸಿ ಚನ್ನರಾಜ್ ಸೇರಿ ಎಲ್ಲರನ್ನೂ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಪೃಥ್ವಿಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‌ಸಿ ಚೆನ್ನರಾಜ್ ಪ್ರಭಾವಿ ಇದ್ದಾರೆ, ಇವರ ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆ ಕೂಡ ಇದ್ದಾರೆ. ಇಷ್ಟು ಪ್ರಭಾವ ಇದ್ದಾಗಲೇ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆಸಲು ಸಾಧ್ಯ. ಆಡಳಿತ ಪಕ್ಷದ ಸದಸ್ಯ ಮೊಬೈಲ್ ಕಿತ್ತುಕೊಂಡು ಚೂರಿ ಇರಿದಿದ್ದು ಖಂಡನೀಯ. ರಾಜ್ಯ ಸರ್ಕಾರವೇ ಬೆಳಗಾವಿಯಲ್ಲಿದೆ, ಇಂಥ ವೇಳೆ ಹಲ್ಲೆ ನಡೆಸಲಾಗಿದೆ. ದಲಿತ ಮುಖಂಡನ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ಮಾಡಿ ದರ್ಪ ತೋರಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಿಪಕ್ಷದ ಎಲ್ಲ ಪ್ರಶ್ನೆಗೆ ಕಾಂಗ್ರೆಸ್ ಸರ್ಕಾರ ಉತ್ತರಿಸಲಿದೆ: ಸಿಎಂ ಸಿದ್ದರಾಮಯ್ಯ
ಪೊಲೀಸ್ ವ್ಯವಸ್ಥೆ ಮೇಲೆ ನಮಗೆ ವಿಶ್ವಾಸ ಇಲ್ಲ. ಪೃಥ್ವಿಸಿಂಗ್ ಭಯಭೀತರಾಗಿದ್ದು, ನಮ್ಮ ಕುಟುಂಬ ಸದಸ್ಯರಿಗೆ ಭದ್ರತೆ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ ಎಂದರು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಎಲ್ಲ ದುಷ್ಟರನ್ನು ಬಂಧಿಸಬೇಕು. ಬಂಧಿಸದಿದ್ದರೆ ರಾಜ್ಯದ ನಮ್ಮ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಆಗ್ರಹಿಸಿದರು.
ಜಯನಗರದ ಪೃಥ್ವಿಸಿಂಗ್ ನಿವಾಸಕ್ಕೆ ಈ ಎಲ್ಲರೂ ಸೋಮವಾರ ಸಂಜೆ ನಾಲ್ಕೂವರೆಗೆ ಹೋಗಿದ್ದರು. ಬಳಿಕ ಮನೆಯಿಂದ ಪೃಥ್ವಿಸಿಂಗ್‌ರನ್ನು ಹೊರಗೆ ಕರೆಸುತ್ತಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತದೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಲು ಪೃಥ್ವಿಸಿಂಗ್ ಮುಂದಾಗುತ್ತಾರೆ. ಆಗ ಪೃಥ್ವಿಸಿಂಗ್ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಲಾಗುತ್ತದೆ ಎಂದರು.