ಕಾಂಗ್ರೆಸ್ಸಿಗರಿಗೆ ‘ಅಲ್ಲಾ ಹೋ ಅಕ್ಬರ್‌, ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಹೇಳಿದ್ದರೆ ಖುಷಿಯಾಗುತ್ತಿತ್ತಾ?

‘ಜೈ ಶ್ರೀರಾಮ್‌’ ಎಂದು ಕೂಗುವುದರಲ್ಲಿ ಏನು ತಪ್ಪಿದೆ?| ಘಟನೆಯನ್ನು ಕಾಂಗ್ರೆಸ್‌ ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕಿತ್ತು| ದೇಶದ ಜನ, ರಾಜ್ಯದ ಜನ ಅದರಲ್ಲೂ ಭದ್ರಾವತಿ ಜನ ಎಲ್ಲದನ್ನೂ ಗಮನಿಸುತ್ತಿದ್ದಾರೆ| ಕಾಂಗ್ರೆಸ್‌ ಇದೇ ಮನಃಸ್ಥಿತಿ ಮುಂದುವರಿಸಿಕೊಂಡು ಹೋದರೆ, ಅಧೋಗತಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ: ಈಶ್ವರಪ್ಪ| 

Minister KS Eshwarappa Slam Congress grg

ಶಿವಮೊಗ್ಗ(ಮಾ.14): ‘ಜೈ ಶ್ರೀರಾಮ್‌’ ಎಂದರೆ ಹಲ್ಲೆ ನಡೆಸುವ ಕಾಂಗ್ರೆಸ್ಸಿಗರಿಗೆ ‘ಅಲ್ಲಾ ಹೋ ಅಕ್ಬರ್‌, ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಹೇಳಿದ್ದರೆ ಖುಷಿಯಾಗುತ್ತಿತ್ತಾ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಕಬಡ್ಡಿ ಮ್ಯಾಚ್‌ ವೇಳೆಯಲ್ಲಿ ‘ಜೈ ಶ್ರೀರಾಮ್‌’ ಎಂದು ಕೂಗಿದ್ದಕ್ಕೆ ಕಾಂಗ್ರೆಸ್ಸಿಗರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಈಗ ಸಮಾವೇಶ ನಡೆಸುತ್ತಿದ್ದಾರೆ. ಈ ಸಮಾವೇಶದಲ್ಲಿ ಘಟಾನುಘಟಿಗಳು ಭಾಗಿಯಾಗುತ್ತಿದ್ದಾರೆ ಎಂದರು.

ನಾವು ಶ್ರೀರಾಮನ ಮಕ್ಕಳೇ, ಅದೇ ಸಂಸ್ಕೃತಿಯಲ್ಲಿ ಬೆಳೆದವರು: ಸಿಎಂ ಜಿಲ್ಲೆಯಲ್ಲಿ ಗುಡುಗಿದ ಡಿಕೆಶಿ

ಆದರೆ ಈ ಸಮಾವೇಶ ನಡೆಸುವ ಮುಂಚೆ ಕಾಂಗ್ರೆಸ್‌ನ ಈ ನಾಯಕರು ಭದ್ರಾವತಿಗೆ ಒಮ್ಮೆಯಾದರೂ ಭೇಟಿ ನೀಡಿದ್ದರಾ? ಅಲ್ಲಿ ಏನೇನು ನಡೆಯಿತು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರಾ? ಮೊದಲು ಅದನ್ನು ಮಾಡಲಿ ಎಂದರು.
ಪಂದ್ಯಾವಳಿ ಗೆದ್ದದ್ದಕ್ಕೆ ತಂಡವೊಂದು ಸಹಜವಾಗಿಯೇ ‘ಜೈ ಶ್ರೀರಾಮ್‌’, ‘ಭಾರತ್‌ ಮಾತಾಕಿ ಜೈ’ ಎಂದು ಕೂಗಿದ್ದಾರೆ. ಘೋಷಣೆ ಕೂಗುವುದರಲ್ಲಿ ಏನು ತಪ್ಪಿದೆ? ಈ ರೀತಿ ಕೂಗಿದ್ದಕ್ಕೆ ಭದ್ರಾವತಿ ಶಾಸಕ ಸಂಗಮೇಶ್‌ ಮತ್ತವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ಏಕೆ ನೋವಾಯಿತೋ, ಗೊತ್ತಿಲ್ಲ. ಹಾಗಾದರೆ ‘ಪಾಕಿಸ್ತಾನ್‌ ಜಿಂದಾಬಾದ್‌’ ಅಥವಾ ‘ಅಲ್ಲಾ ಹೋ ಅಕ್ಬರ್‌’ ಎಂದು ಹೇಳಿದರೆ ಶಾಸಕ ಸಂಗಮೇಶ್‌ ಸಂತೋಷ ಪಡುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿ ಘಟನೆಯನ್ನು ಕಾಂಗ್ರೆಸ್‌ ಸ್ಪರ್ಧಾ ಮನೋಭಾವದಲ್ಲಿ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಮಾವೇಶ ನಡೆಸುತ್ತಿರುವುದು ಸರಿ ಅಲ್ಲ. ದೇಶದ ಜನ, ರಾಜ್ಯದ ಜನ ಅದರಲ್ಲೂ ಭದ್ರಾವತಿ ಜನ ಎಲ್ಲದನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್‌ ಇದೇ ಮನಃಸ್ಥಿತಿಯನ್ನು ಮುಂದುವರಿಸಿಕೊಂಡು ಹೋದರೆ, ಅಧೋಗತಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದರು.
 

Latest Videos
Follow Us:
Download App:
  • android
  • ios