ಶಿವಮೊಗ್ಗ(ಜು.06): ನಗರದಲ್ಲಿ ನಡೆಯುತ್ತಿರುವ ಹುಕ್ಕಾಬಾರ್‌ ಪರವಾನಗಿ ತಕ್ಷಣವೇ ರದ್ದುಗೊಳಿಸುವಂತೆ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಕರೆಯಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಕೆ. ವಿ. ವಸಂತಕುಮಾರ್‌ ಮಾತನಾಡಿ, ಗೋಪಾಳದಲ್ಲಿರುವ ಹುಕ್ಕಾಬಾರ್‌ಗೆ ನಿತ್ಯ ಯುವಕರು ಸೇರಿದಂತೆ ಅನೇಕರು ಹೋಗುತ್ತಿದ್ದಾರೆ. ರಾತ್ರಿಯೆಲ್ಲಾ ಜನ ಸೇರುತ್ತಾರೆ. ಕೊರೋನಾದಂತಹ ಸಂದರ್ಭದಲ್ಲಿ ಇವೆಲ್ಲಾ ಬೇಕಾ ಎಂದು ಪ್ರಶ್ನಿಸಿದರು. 

ಮಕ್ಕಳಿದ್ರೂ ಪರ ಪುರುಷನ ಸಂಗ ಬಿಡದ ಹೆಂಡ್ತಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ

ಹುಕ್ಕಾಬಾರ್‌ ಶಬ್ದ ಕೇಳುತ್ತಿದ್ದಂತೆ ಒಂದು ಕ್ಷಣ ದಂಗಾದ ಈಶ್ವರಪ್ಪ ಅವರು ಹುಕ್ಕಾಬಾರಾ ಅಂದರೆ ಎಂದು ಪ್ರಶ್ನಿಸುವ ಹೊತ್ತಿಗೆ ಇದೆಲ್ಲ ತಿಳಿದುಕೊಳ್ಳುವ, ಟ್ರೈ ಮಾಡುವ ಯತ್ನ ಬೇಡಾ ಸಾರ್‌ ಎಂದು ಸಭೆಯಲ್ಲಿದ್ದವರು ಕಾಲೆಳೆದರು. ಕೊನೆಗೆ ವಿಷಯ ಅರಿತ ಸಚಿವರು ತಕ್ಷಣವೇ ಇದಕ್ಕೆ ನೀಡಿರುವ ಲೈಸೆನ್ಸ್‌ ರದ್ದುಗೊಳಿಸುವಂತೆ ಸೂಚನೆ ನೀಡಿದರಲ್ಲದೇ ಈ ಕ್ಷಣವೇ ಅದನ್ನು ನಿಲ್ಲಿಸಿ ಬಿಡಿ ಎಂತಲೂ ಆದೇಶಿಸಿದರು.

ವಯೋವೃದ್ಧರು, ಅಂಗವಿಕಲರಿಗೆ ಸಕಾಲದಲ್ಲಿ ಪಿಂಚಣಿ: ಒತ್ತಾಯ

ಶಿವಮೊಗ್ಗ: ಅಂಗವಿಕಲರು, ವಿಧವೆಯರು ಹಾಗೂ ವೃದ್ಧರಿಗೆ ಸರ್ಕಾರದಿಂದ ನಿಗದಿತ ಸಮಯಕ್ಕೆ ಪಿಂಚಣಿ ನೀಡುವಂತೆ ಒತ್ತಾಯಿಸಿ ತೇಜಸ್ವಿನಿ ಮಹಿಳಾ ಸಂಘದಿಂದ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್‌. ಈಶ್ವರಪ್ಪಗೆ ಮನವಿ ಸಲ್ಲಿಸಲಾಯಿತು. ಹಲವಾರು ತಿಂಗಳಿನಿಂದ ಮಾಸಿಕ ಪಿಂಚಣಿ ಹಣ ಬರದೇ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಕೊರೋನ ವೈರಸ್‌ ಆತಂಕದ ನಡುವೆಯೂ ಪಿಂಚಣಿ ಹಣಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ಪ್ರತಿನಿತ್ಯ 50 ರಿಂದ 100 ಪಿಂಚಣಿದಾರರು ಸಾಲಾಗಿ ನಿಲ್ಲುವ ಪರಿಸ್ಥಿತಿ ಇದೆ. ಅಗತ್ಯ ದಾಖಲೆಗಳನ್ನು ಈ ಮೊದಲು ನೀಡಿದ್ದರೂ ಸಹ ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.

ಕೆಲವರಿಗೆ ಪಿಂಚಣಿ ಮಂಜೂರಾತಿ ಸರ್ಕಾರದ ಆದೇಶ ಬಂದು 15 ತಿಂಗಳು ಆಗಿದ್ದರೂ ಸಹ ಇನ್ನೂ ತಾಲ್ಲೂಕು ಆಡಳಿತ ಪಿಂಚಣಿ ಬಿಡುಗಡೆ ಮಾಡದೆ ವಿನಃ ಕಾರಣ ತೊಂದರೆ ನೀಡಲಾಗುತ್ತಿದೆ. ಇದರಿಂದಾಗಿ ಅಂಗವಿಕಲರಿಗೆ, ವೃದ್ದರಿಗೆ ಮತ್ತು ವಿಧವೆಯರಿಗೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ಸತ್ಯನಾರಾಯಣ, ಮಂಜುಳಾ ಪಾಂಡೆ, ಕಲ್ಪನಾ ರಮೇಶ್‌, ಭಾಗ್ಯ, ಸುಶೀಲಮ್ಮ, ಶಾಂತಮ್ಮ ಇತರರು ಇದ್ದರು.