ಶಕ್ತಿ ಯೋಜನೆ: 2.51 ಕೋಟಿ ಮಹಿಳೆಯರ ಪ್ರಯಾಣ, ಸಚಿವ ಜಾರ್ಜ್
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 2,94,220 ಕುಟುಂಬಗಳು ನೋಂದಣಿಯಾಗಿದ್ದು, ಪ್ರತಿ ತಿಂಗಳು 10 ಕೋಟಿ ರು.ಗಳ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಹೇಳಿದ ಸಚಿವ ಕೆ.ಜೆ. ಜಾರ್ಜ್
ಚಿಕ್ಕಮಗಳೂರು(ಜ.27): ಕಳೆದ 8 ತಿಂಗಳಲ್ಲಿ 2.51 ಕೋಟಿ ಮಹಿಳೆಯರು ಜಿಲ್ಲೆಯಲ್ಲಿ ಶಕ್ತಿ ಯೋಜನೆ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ವಿವಿಧೆಡೆ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಇವರಿಗೆ 89 ಕೋಟಿ ರು.ಗಳ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದರು. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 2,94,220 ಕುಟುಂಬಗಳು ನೋಂದಣಿಯಾಗಿದ್ದು, ಪ್ರತಿ ತಿಂಗಳು 10 ಕೋಟಿ ರು.ಗಳ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಹೇಳಿದರು.
ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸೋಲಾರ್ ಮುಖಾಂತರ ವಿದ್ಯುತ್ ಸರಬರಾಜು ಮಾಡಲು ಜಿಲ್ಲೆಯಲ್ಲಿ ಕುಸುಮ್ ಯೋಜನೆಯಡಿ 167 ಎಕರೆ ಭೂಮಿ ಗುರುತಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 27.20 ಎಕರೆ, ತರೀಕೆರೆ ತಾಲೂಕಿನ ದೋರನಾಳಿನಲ್ಲಿ 10 ಎಕರೆ, ಕಡೂರು ತಾಲೂಕಿನಲ್ಲಿ 120, ಅಜ್ಜಂಪುರ ತಾಲೂಕಿನಲ್ಲಿ 10 ಎಕರೆ ಗುರುತಿಸಲಾಗಿದ್ದು, ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಂಟಿ ಸ್ಥಳ ತನಿಖೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ 4 ತಾಲೂಕುಗಳ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಹೋಮ ಮಾಡಿ ಮುತ್ತಿಗೆ ಹಾಕಿದ್ದ ಹಿಂದೂ ಕಾರ್ಯಕರ್ತರ ಮೇಲೆ ಕೇಸ್
ಮಹಿಳೆಯರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ನಮ್ಮ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಇದುವರೆಗೆ 2,52,593 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ ಅಂತ್ಯದವರೆಗೆ 239 ಕೋಟಿ ರು. ಡಿಬಿಟಿ ಮೂಲಕ ಸಂದಾಯ ಮಾಡಲಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 2,39,276 ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಸುಮಾರು 7,89,897 ಜನರಿಗೆ ತಲಾ 170 ರು. ರಂತೆ ಒಟ್ಟು 74.45 ಕೋಟಿ ರು.ಗಳು ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡಲು ಯುವನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 2,250 ನಿರುದ್ಯೋಗಿ ಯುವಕರು ಅರ್ಜಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹಿರೇಮಗಳೂರು ಅರ್ಚಕ ಕಣ್ಣನ್‌ಗೆ ನೀಡಿದ್ದ ನೋಟಿಸ್ ವಾಪಸಾತಿಗೆ ಆದೇಶಿಸಿದ ಸಚಿವ ರಾಮಲಿಂಗಾರೆಡ್ಡಿ!
ಕಡತಗಳ ವಿಲೇವಾರಿ ಚುರುಕುಗೊಳಿಸಲು ಎಲ್ಲಾ ಇಲಾಖೆಗಳಲ್ಲೂ ಇ-ಆಡಳಿತ ವ್ಯವಸ್ಥೆ ಜಾರಿಗೆ ತರಲು ಕ್ರಮವಹಿಸ ಲಾಗಿದೆ. ಈಗಾಗಲೇ ತಾಲೂಕು ಕಚೇರಿಗಳ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತ ದಲ್ಲಿ ರಾಜ್ಯದ 31 ತಾಲೂಕು ಕಚೇರಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಜಿಲ್ಲೆಯ ಚಿಕ್ಕಮಗಳೂರು ತಾಲೂಕನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಹಳೆಯ ಕಡತಗಳ ಸ್ಕ್ಯಾನಿಂಗ್ ಮತ್ತು ಡಿಜಲೀಕರಣ ಮಾಡಲಾಗುವುದು. ಇಲಾಖೆ ಪೋರ್ಟಲ್ ನಿಂದ ಸಾರ್ವಜನಿಕರು ನೇರವಾಗಿ ದಾಖಲೆ ಪಡೆಯಲು ಅವಕಾಶವಿರುತ್ತದೆ. ಇದಕ್ಕಾಗಿ ಅಗತ್ಯ ಅನುದಾನ ವನ್ನು ಬಿಡುಗಡೆ ಮಾಡಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಭಾರಿ ಮಳೆಯಿಂದ ಅತಿವೃಷ್ಟಿ ಸಂಭವಿಸಿದ ಹಿನ್ನೆಲೆಯಲ್ಲಿ ರೈತರ ಬೆಳೆ ನಾಶವಾದ ಕಾರಣ ಸರ್ಕಾರ ಸದರಿ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ಕೈಗೊಂಡು ರೈತರಿಗೆ ಉಂಟಾಗಿರುವ ನಷ್ಟ ಭರಿಸಲು ರೈತರ ಖಾತೆಗೆ ಬೆಳೆ ಪರಿಹಾರ ಹಣವನ್ನು ನೇರವಾಗಿ ಜಮೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ, ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು.