ಬೆಂಗಳೂರು(ಏ.19): ನಗರದಲ್ಲಿ ಕೊರೋನಾ ಕೈಮೀರುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

"

ಭಾನುವಾರ ಬಿಬಿಎಂಪಿ ಪಶ್ಚಿಮ ವಲಯ ಕಚೇರಿಗೆ ಭೇಟಿ ನೀಡಿ ಕೊರೋನಾ ವ್ಯವಸ್ಥೆ ಹಾಗೂ ವಾರ್‌ ರೂಂ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಚಿಕಿತ್ಸೆ ನೀಡಿ ನಿಯಂತ್ರಣ ಮಾಡುತ್ತಿದ್ದೇವೆ. ಮತ್ತೊಂದೆಡೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಿ ನಿಯಂತ್ರಣ ಮಾಡಬೇಕಿದೆ. ದಿನ ನಿತ್ಯದ ಚಟುವಟಿಕೆಗಳು ನಡೆಯುತ್ತಿದ್ದರೆ, ಕೊರೋನಾ ನಿಯಂತ್ರಣ ಅಸಾಧ್ಯ. ಆದ್ದರಿಂದ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಗರದ ಎಂಟೂ ವಲಯಗಳಿಗೆ ಭೇಟಿ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ನ್ಯೂನ್ಯತೆಗಳಿದ್ದರೆ, ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಆಪ್ತಮಿತ್ರ ಸಹಾಯವಾಣಿ ಕರೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆಯೇ, ವಾರ್‌ ರೂಂ ಕರೆಗಳಿಗೆ ಆಸ್ಪತ್ರೆ ಹಾಗೂ ಬೆಡ್‌ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಾಗಿದೆ. ಸೋಮವಾರ ಸಭೆ ನಡೆಸಿ ಸರಿಯಾದ ಸಮಯಕ್ಕೆ ಬೆಡ್‌ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದರು.

ಕೊರೋನಾರ್ಭಟ: ಸರ್ಕಾರವನ್ನು ನಂಬಿದ್ರೆ ಜೀವ ಕಳೆದುಕೊಳ್ಳೋದು ಗ್ಯಾರಂಟಿ, ಸುರೇಶ್‌

ಬೆಡ್‌ ನೀಡದ ಆಸ್ಪತ್ರೆ ಲೈಸೆನ್ಸ್‌ ರದ್ದು:

ಖಾಸಗಿ ಆಸ್ಪತ್ರೆಗಳು ಬೆಡ್‌ ನೀಡದಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ಕಳೆದ 15 ದಿನಗಳಿಂದ ಸತತವಾಗಿ ಮನವಿ ಮಾಡಿದರೂ ಕೆಲವು ಆಸ್ಪತ್ರೆಗಳ ಮುಖ್ಯಸ್ಥರ ಧೋರಣೆ ಖಂಡನಾರ್ಹವಾಗಿದೆ. ಸರ್ಕಾರ ಇದನ್ನು ಸಹಿಸುವುದಿಲ್ಲ. ಇನ್ನು ಮುಂದೆಯೂ ಸಹಕಾರ ನೀಡದಿದ್ದರೆ, ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಇದೇ ವೇಳೆ ಸುಧಾಕರ್‌ ಹೇಳಿದರು.

ಖಾಸಗಿ ಆಸ್ಪತ್ರೆಗಳು ಮನಸೋಇಚ್ಛೆ ದರ ವಿಧಿಸುತ್ತಿರುವುದು ಸರ್ಕಾರಕ್ಕೆ ತಿಳಿದು ಬಂದಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಯಾವುದೇ ಮುಲಾಜಿಲ್ಲದೆ, ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಲಾಗುತ್ತದೆ. ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಸರ್ಕಾರ ಮತ್ತು ಜನರು ಸಹಿಸುವುದಿಲ್ಲ. ಖಾಸಗಿ ಆಸ್ಪತ್ರೆಗಳು ಮಿತಿಮೀರಿ ನಡೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ನೀಡದೆ, ದಿಢೀರ್‌ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.