ಜನರ ಜೀವದೊಂದಿಗೆ ಸರ್ಕಾರ ಚೆಲ್ಲಾಟ| ನೈಟ್‌ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೈಟ್‌ ಕರ್ಫ್ಯೂ ಅವೈಜ್ಞಾನಿಕ| ಜನರು ಜೀವಕ್ಕೆ ಬೆಲೆ ನೀಡಬೇಕಾದ ಸರ್ಕಾರ, ಮೋಜು, ಮಸ್ತಿ, ಹಣ ಮತ್ತು ಅಧಿಕಾರದ ಆಸೆಗೆ ಬಿದ್ದಿದೆ: ಡಿಕೆಸು| 

ಬೆಂಗಳೂರು(ಏ.19): ಕೊರೋನಾ ನಿಯಂತ್ರಿಸುವಲ್ಲಿ ಮಂತ್ರಿಗಳು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಎದುರಾಗಿದ್ದು, ಸರ್ಕಾರವನ್ನು ನಂಬಿ ಕುಳಿತರೆ ಸಾರ್ವಜನಿಕರು ತಮ್ಮ ಜೀವ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಸಂಸದ ಡಿ.ಕೆ.ಸುರೇಶ್‌ ಎಚ್ಚರಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಕೊರೋನಾವನ್ನು ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿರುವುದರಿಂದ ಒಂದೇ ವ್ಯಕ್ತಿಗೆ ಬೇರೆ ಬೇರೆ ಕಡೆ ಟೆಸ್ಟ್‌ ಮಾಡಿದರೆ, ಪಾಸಿಟಿವ್‌/ನೆಗೆಟಿವ್‌ ವರದಿಗಳು ಬರುತ್ತಿವೆ. ಈ ಮೂಲಕ ಸರ್ಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದರು.

ಖಾಸಗಿ ಕಂಪನಿಯೊಂದರ 20 ನೌಕರರಿಗೆ ಕೊರೋನಾ ಸೋಂಕು

ಜನರು ಜೀವಕ್ಕೆ ಬೆಲೆ ನೀಡಬೇಕಾದ ಸರ್ಕಾರ, ಮೋಜು, ಮಸ್ತಿ, ಹಣ ಮತ್ತು ಅಧಿಕಾರದ ಆಸೆಗೆ ಬಿದ್ದಿದೆ. ಹೀಗಾಗಿ, ಯಾರೊಬ್ಬರು ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿಲ್ಲ. ಕೊರೋನಾ ಟೆಸ್ಟ್‌ ವೇಳೆ ಆಸ್ಪತ್ರೆ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತಾವು ಮಾಡಿದ್ದೇ ಸರಿ, ನಾವು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.

ನೈಟ್‌ ಕರ್ಫ್ಯೂ ಅವೈಜ್ಞಾನಿಕ

ರಾತ್ರಿ ವೇಳೆ ಸರಕು ಸಾಗಣೆ, ಹಣ್ಣು ತರಕಾರಿ ಮಾರಾಟಗಾರರು ಸಂಚರಿಸುತ್ತಾರೆಯೇ ವಿನಾ ಬೇರೆ ಯಾರು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುವುದಿಲ್ಲ. ರಾಜ್ಯದ ಶೇ.1ರಿಂದ 2ರಷ್ಟು ಮಾತ್ರ ಜನರು ಮಾತ್ರ ರಾತ್ರಿ ವೇಳೆ ಸಂಚರಿಸಬಹುದು. ಉಳಿದ ಶೇ.98ರಷ್ಟು ಜನರು ಹಗಲಿನಲ್ಲಿ ಸಂಚರಿಸುತ್ತಾರೆ. ಇವರಿಗೆ ಕಾನೂನುಗಳನ್ನು ಜಾರಿಗೊಳಿಸಿ ಬಂದೋಬಸ್ತ್‌ ಮಾಡಬೇಕೇ ಹೊರತು ನೈಟ್‌ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೈಟ್‌ ಕರ್ಫ್ಯೂ ಅವೈಜ್ಞಾನಿಕ ಎಂದು ಡಿ.ಕೆ.ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.