ಕೊರೋನಾ 3ನೇ ಅಲೆಗೆ ಜನರ ಆಹ್ವಾನವೇ ಕಾರಣ: ಡಾ. ಸುಧಾಕರ್‌

* ಉಡುಪಿ ಜಿಲ್ಲೆಯಲ್ಲಿ ಶೇ 40ರಷ್ಟು ಜನರಿಗೆ ಲಸಿಕೆ ಆಗಿರುವುದು ಶ್ಲಾಘನೀಯ
* ಲಸಿಕೆಯಲ್ಲಿ ಬೆಂಗಳೂರು ಬಿಟ್ಟರೇ 2ನೇ ಸ್ಥಾನದಲ್ಲಿರುವ ಉಡುಪಿ
* ಕೊರೋನಾವನ್ನು ತಡೆಯಲು ಮುಂಜಾಗರೂಕತೆಯೊಂದೇ ಪರಿಹಾರ
 

Minister K Sudhakar Talks Over Corona 3rd Wave in Karnataka grg

ಕಾರ್ಕಳ(ಜು.15): ರಾಜ್ಯದಲ್ಲಿ ಕೊರೋನಾದ 3ನೇ ಅಲೆ ಬಂದರೆ ಅದಕ್ಕೆ ವೈರಸ್‌ ಕಾರಣ ಅಲ್ಲ, ತಮ್ಮ ನಿರ್ಲಕ್ಷ್ಯದಿಂದ ಅದನ್ನು ಆಹ್ವಾನಿಸುತ್ತಿರುವ ನಾಗರಿಕರೇ ಕಾರಣ ಎಂದು ರಾಜ್ಯ ಅರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿದ್ದಾರೆ.
ಅವರು ಬುಧವಾರ ಇಲ್ಲಿನ ಬೆಳ್ಮಣ್‌ನಲ್ಲಿ ಕೊರೋನಾ 3ನೇ ಅಲೆಯ ಮುನ್ನೆಚ್ಚರಿಕೆಯಾಗಿ 15 ವರ್ಷದೊಳಗಿನ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ‘ವಾತ್ಸಲ್ಯ’ವನ್ನು ಉದ್ಘಾಟಿಸಿ ಮಾತನಾಡಿದರು.

ಕೊರೋನಾವನ್ನು ತಡೆಯಲು ಮುಂಜಾಗರೂಕತೆಯೊಂದೇ ಪರಿಹಾರ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿದರೆ ನೂರಕ್ಕೆ ನೂರು ಕೊರೋನಾ ತಡೆಯಬಹುದು. ಕೇರಳದಲ್ಲಿ ಇನ್ನೂ 2ನೇ ಅಲೆ ಮುಗಿದಿಲ್ಲ. ಆದ್ದರಿಂದ ಅಲ್ಲಿಂದ ಜನರು ಬಂದು ಹೋಗುವ ಉಡುಪಿ, ಮಂಗಳೂರು ಜಿಲ್ಲೆಯ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದವರು ಸಲಹೆ ಮಾಡಿದರು.

ನಾವೀಗ ಹೊಸ ಭಾರತದಲ್ಲಿದ್ದೇವೆ. ಮೋದಿ ಅವರ ಸಮರ್ಥ ನಾಯಕತ್ವ ನಮ್ಮ ದೇಶಕ್ಕಿದೆ. ಲಸಿಕೆಗಾಗಿ ನಾವಿಂದು ಬೇರೆ ದೇಶಗಳನ್ನು ಕಾಯಬೇಕಾಗಿಲ್ಲ. ನಮ್ಮ ದೇಶದಲ್ಲಿಯೇ ನಮ್ಮ ಸಂಶೋಧಕರೇ ಲಸಿಕೆ ಕಂಡು ಹಿಡಿದಿದ್ದಾರೆ. ಇದು ಭಾರತ ಸಾಮರ್ಥ್ಯವಾಗಿದೆ ಎಂದರು.

ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡಲಿ: ಶರಣಪ್ರಕಾಶ ಪಾಟೀಲ

3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾಮಕ್ಕಳ ಅರೋಗ್ಯ ತಪಾಸಣೆ ಕಾರ್ಯಕ್ರಮ ಉಡುಪಿ ಜಿಲ್ಲೆಯಿಂದ ಆರಂಭವಾಗಿದೆ. ಈ ತಪಾಸಣೆಯ ಸಂದರ್ಭ ಮಕ್ಕಳಲ್ಲಿರುವ ಇತರ ಆನಾರೋಗ್ಯಗಳೂ ಪತ್ತೆಯಾಗುತ್ತವೆ. ಜೊತೆಗೆ ಅಪೌಷ್ಠಿಕತೆಯ ಮಕ್ಕಳೂ ಪತ್ತೆಯಾಗುತ್ತಾರೆ. ಅಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸುಲಭವಾಗುತ್ತದೆ ಎಂದರು. ಇದೇ ಸಂದರ್ಭ ಸಚಿವರು ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಕಿಟ್‌ಗಳನ್ನು ವಿತರಿಸಿದರು.

ಕಾರ್ಕಳ ಶಾಸಕ ಸುನಿಲ್‌ ವಿ. ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಪಾಟೀಲ್‌ ಓಂಪ್ರಕಾಶ್‌, ಮೈಸೂರು ವಿಭಾಗ ಜಂಟಿನಿರ್ದೇಶಕ ಡಾ.ಉದಯಕುಮಾರ್‌ ಎಂ.ಆರ್‌., ಜಿಪಂ ಸಿಇಓ ಡಾ.ನವೀನ್‌ ಭಟ್‌, ಡಿಎಚ್‌ಓ ಡಾ.ನಾಗಭೂಷಣ ಉಡುಪಿ, ಟಿಎಚ್‌ಓ ಡಾ.ಕೃಷ್ಣಾನಂದ, ತಹಸೀಲ್ದಾರ್‌ ಪ್ರಕಾಶ್‌, ತಾಪಂ ಇಓ ಗುರುದತ್‌, ಐಎಂಎ ರಾಜ್ಯಾಧ್ಯಕ್ಷ ಡಾ. ಸುರೇಶ್‌ ಕುಡ್ವ, ಮಂಗಳೂರು ಎ.ಜೆ. ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಅಕ್ಷತಾ, ವಾತ್ಸಲ್ಯ ಸಂಯೋಜಕರಾದ ರೇಷ್ಮಾ ಉದಯ ಶೆಟ್ಟಿಮತ್ತು ಸುಮಿತ್‌ ಶೆಟ್ಟಿ, ಗೇರು ಮಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬೆಳ್ಮಣ್‌ ಗ್ರಾಪಂ ಅಧ್ಯಕ್ಷ ಜನಾರ್ದನ ತಂತ್ರಿ ವೇದಿಕೆಯಲ್ಲಿದ್ದರು.

ಲಸಿಕೆಯಲ್ಲಿ ಉಡುಪಿ ಜಿಲ್ಲೆ 2ನೇ ಸ್ಥಾನ

ಉಡುಪಿ ಜಿಲ್ಲೆಯಲ್ಲಿ ಶೇ 40ರಷ್ಟು ಜನರಿಗೆ ಲಸಿಕೆ ಆಗಿರುವುದು ಶ್ಲಾಘನೀಯ, ಲಸಿಕೆಯಲ್ಲಿ ಬೆಂಗಳೂರು ಬಿಟ್ಟರೇ ಉಡುಪಿ 2ನೇ ಸ್ಥಾನದಲ್ಲಿದೆ. ಜಿಲ್ಲೆಗೆ ಇನ್ನೂ ಹೆಚ್ಚು ಲಸಿಕೆಯ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದರು.

ಕಾರ್ಕಳಕ್ಕೆ ಶೀಘ್ರ ನರ್ಸಿಂಗ್‌ ಕಾಲೇಜು

ಕಾರ್ಕಳ ಶಾಸಕ ಸುನಿಲ್‌ ಕುರ್ಮಾ ಅವರ ಬೇಡಿಕೆಯಂತೆ, ಇಲ್ಲಿ ಸರ್ಕಾರಿ ನರ್ಸಿಂಗ್‌ ಕಾಲೇಜಿಗೆ ಆರಂಭಿಸುವ ಬಗ್ಗೆ ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಚರ್ಚೆ ಆಗಿದೆ. ಆದ್ದರಿಂದ ಶೀಘ್ರದಲ್ಲಿಯೇ ಸರ್ಕಾರಿ ನರ್ಸಿಂಗ್‌ ಕಾಲೇಜಿಗೆ ಮಂಜೂರಾತಿ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
 

Latest Videos
Follow Us:
Download App:
  • android
  • ios