ಹುಬ್ಬಳ್ಳಿ(ಡಿ.19): ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆ ಕಾಂಗ್ರೆಸ್‌ನ ವ್ಯವಸ್ಥಿತ ಹಾಗೂ ಪೂರ್ವನಿಯೋಜಿತ ಸಂಚು. ಇದಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್‌ ಇತಿಹಾಸದಲ್ಲೇ ಇಂತಹ ವಿಷಾದಕರ ಘಟನೆ ನಡೆದಿರುವುದು ಇದೇ ಮೊದಲು. ಕಾಂಗ್ರೆಸ್‌ಗೆ ಬಹುಮತವಿಲ್ಲದಿದ್ದರೂ ಭಂಡತನದಿಂದ ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಕಾಂಗ್ರೆಸ್‌ ಕುತಂತ್ರ ರಾಜಕಾರಣ ಮಾಡಿದೆ ಎಂದರು.

ಅವಿಶ್ವಾಸ ಮಂಡನೆ ಕುರಿತು 14 ದಿನಗಳ ಹಿಂದೆಯೇ ಸಭಾಪತಿಗಳಿಗೆ ಪತ್ರ ನೀಡಲಾಗಿತ್ತು. ಬಿಜೆಪಿ- ಜೆಡಿಎಸ್‌ ಎರಡೂ ಒಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದೆವು. ಆದರೂ ಏಕೆ ಅದನ್ನು ಅಜೆಂಡಾದಲ್ಲಿ ಸೇರಿಸಿರಲಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಭಂಡತನ ಪ್ರದರ್ಶಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದೆ ಎಂದರು.

'ಎಚ್‌​ಡಿ​ಕೆ​ಯನ್ನು ಸಿಎಂ ಮಾಡಿದ್ದು ಸಿದ್ದ​ರಾ​ಮ​ಯ್ಯ​ ಅಲ್ಲ, ಹೈಕ​ಮಾಂಡ್‌'

ಬಹುಮತವಿಲ್ಲ ಎಂದ ಮೇಲೆ ಸಭಾಪತಿ ಸ್ಥಾನದಲ್ಲಿರುವವರು ಸಹಜವಾಗಿ ರಾಜೀನಾಮೆ ನೀಡಬೇಕಿತ್ತು ಅಥವಾ ಬಹುಮತ ಸಾಬೀತಪಡಿಸಬೇಕಿತ್ತು. ಇವೆರಡನ್ನು ಮಾಡದೇ ಅವಿಶ್ವಾಸವನ್ನೂ ಅಜೆಂಡಾದಲ್ಲೂ ಸೇರಿಸದೇ ಭಂಡತನ ಪ್ರದರ್ಶಿಸಿದ್ದಾರೆ. ದಾದಾಗಿರಿ ಮಾಡಿಕೊಂಡು ಬಹುಮತ ಇಲ್ಲದಿದ್ದರೂ ಸಭಾಪತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರೆ ಜನರು ಕ್ಷಮಿಸುವುದಿಲ್ಲ. ಪ್ರತಾಪಚಂದ್ರ ಶೆಟ್ಟಿ ಸಜ್ಜನ ರಾಜಕಾರಣಿ. ಅವರಿಗೂ ಕಪ್ಪುಚುಕ್ಕೆ ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜನತೆಯ ಕ್ಷಮೆ ಕೇಳಬೇಕು. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿಕೆ ನೀಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಕೂಡಲೇ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಸಭಾಪತಿ ಸ್ಥಾನ ಜೆಡಿಎಸ್‌ಗೆ ಕೊಡಬೇಕೋ ಬಿಜೆಪಿಯಲ್ಲೇ ಇಟ್ಟುಕೊಳ್ಳಬೇಕೋ ಎಂಬುದನ್ನು ಸಭಾಪತಿಗಳು ರಾಜೀನಾಮೆ ಕೊಟ್ಟ ಮೇಲೆ ಎರಡು ಪಕ್ಷಗಳ ಮುಖಂಡರು ಚರ್ಚಿಸಿ ನಿರ್ಧರಿಸುತ್ತೇವೆ ಎಂದರು. ಪಂಚಾಯಿತಿ ಚುನಾವಣೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಲ ಶೇ. 80ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವುದು ಗ್ಯಾರಂಟಿ ಎಂದರು.